ಅಂಬೇಡ್ಕರ್ ಗ್ರಂಥಗಳಿಂದ ಇತಿಹಾಸ ದರ್ಶನ

IMG_20230101_130149
Published on

ಎಚ್.ಡಿ.ಕೋಟೆ: ದೇಶದ ನಿಜವಾದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಮಾತ್ರ ಸಾಕು ಎಂದು ಮೈಸೂರಿನ ಡಿ.ಬನುಮಯ್ಯ ಕಾಲೇಜಿನ ಆಂಗ್ಲ ಉಪನ್ಯಾಸಕ ಡಾ.ಎಂ.ಟಿ ಕೃಷ್ಣಮೂರ್ತಿ ತಿಳಿಸಿದರು.


ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಆದಿ ಕರ್ನಾಟಕ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವತಂತ್ರ ಪೂರ್ವದಲ್ಲಿ ಶೋಷಿತರ ಸ್ಥಿತಿ ತುಂಬ ಶೋಚನೀಯವಾಗಿತ್ತು. ಪೂರ್ವಿಕರು ತಮ್ಮ ಹಕ್ಕುಗಳು, ಸ್ವಾಭಿಮಾನಕ್ಕಾಗಿ 500 ಮಹರ್ ಸೈನಿಕರು ಪೇಶ್ವೆಗಳ ವಿರುದ್ಧ ಹೋರಾಟ ಮಾಡಿ ಜಯಗಳಿಸಿದ ಸಂಕೇತವೇ ಕೋರೆಗಾಂವ್ ವಿಜಯೋತ್ಸವ. ಈಗಿನ ಮಹಾರಾಷ್ಟ್ರ ಭೀಮಾ ನದಿ ತೀರದ ಸ್ಥಳದಲ್ಲಿ ವಿಜಯೋತ್ಸವ ಸ್ತಂಭವನ್ನು ಸ್ಥಾಪಿಸಲಾಗಿದೆ. ಅಂಬೇಡ್ಕರ್ ಅವರು ಮೊದಲ ಬಾರಿಗೆ ಆ ಸ್ಥಳಕ್ಕೆ ಭೇಟಿ ನೀಡಿ ಇದರ ಇತಿಹಾಸವನ್ನು ಅಧ್ಯಯನ ಮಾಡಿ ಜನರಿಗೆ ನಿಜವಾದ ಇತಿಹಾಸವನ್ನು ತಿಳಿಸಿದರು ಎಂದರು.


ಯಾವುದೇ ಇತಿಹಾಸದ ಪುಸ್ತಕಗಳಲ್ಲಿ ಕೋರೆಗಾಂವ್ ಘಟನೆ ಬಗ್ಗೆ ಉಲ್ಲೇಖಿಸಿಲ್ಲ. ಇದನ್ನು ಅರಿತ ಅಂಬೇಡ್ಕರ್ ಅವರು ಇದರ ನೈಜ ಘಟನೆಯನ್ನು ತಮ್ಮ ಸಂಪುಟಗಳಲ್ಲಿ ದಾಖಲಿಸಿದ್ದು ಈ ಇತಿಹಾಸವನ್ನು ಬೇರೆ ಪುಸ್ತಕಗಳಲ್ಲಿ ಕಾಣಲು ಸಾಧ್ಯವಿಲ್ಲ. ಭಾರತದ ನಿಜವಾದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಂಬೇಡ್ಕರ್ ಬರೆದ ಗ್ರಂಥಗಳನ್ನು ಅಧ್ಯಯನ ಮಾಡಿದರೆ ಮಾತ್ರ ಸಾಧ್ಯ ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಅಂಬೇಡ್ಕರ್ ಅವರ ಬಗ್ಗೆ ಮಾತನಾಡಬೇಕು ಎಂದರೆ ಅವರ ಬಗ್ಗೆ ಅಧ್ಯಯನ ಮಾಡಿದ್ದರೆ ಮಾತ್ರ ಸಾಧ್ಯ. ವಿಜಯೋತ್ಸವ ಕಾರ್ಯಕ್ರಮವನ್ನು ಮೊದಲ ಬಾರಿಗೆ ತಾಲೂಕಿನಲ್ಲಿ ಆಯೋಜಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸೋಣ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು.


ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ ಮಾತನಾಡಿ, ಈ ದೇಶದ ಮೂಲ ನಿವಾಸಿಗಳ ಹೋರಾಟದ ಇತಿಹಾಸವನ್ನು ಮನುವಾದಿಗಳು ನೂರಾರು ವರ್ಷಗಳ ಕಾಲ ಮರೆ ಮಾಚಿದ್ದರು. ಇದನ್ನು ಹೊರ ತೆಗೆಯಲು ಅಂಬೇಡರ್ ಅವರ ಅಧ್ಯಯನದಿಂದ ಸಾಧ್ಯವಾಯಿತು ಎಂದರು.


ಅಂತರಸಂತೆ ಬುದ್ಧ ವಿಹಾರದ ಗೌತಮಿ ಬಂತೆ ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ವೆಂಕಟಸ್ವಾಮಿ, ಚಿಕ್ಕವೀರನಾಯಕ, ಸರಗೂರು ಆದಿ ಕರ್ನಾಟಕ ಮಹಸಾಭಾ ಅಧ್ಯಕ್ಷ ಶಿವಣ್ಣ, ಮಾಜಿ ಅಧ್ಯಕ್ಷರಾದ ಮುದ್ದಮಲ್ಲಯ್ಯ, ಮಲಾರ ಪುಟ್ಟಯ್ಯ, ಸೋಗಹಳ್ಳಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೂರ್ತಿ, ಮುಖಂಡರಾದ ಎಂ.ಡಿ.ಮಂಚಯ್ಯ, ಅಕ್ಬರ್ ಪಾಷ, ಪರಶಿವಮೂರ್ತಿ, ಮರಿದೇವಯ್ಯ, ರಮೇಶ್, ಶಂಕರ್, ಮಹಾದೇವಸ್ವಾಮಿ, ಜಿವಿಕ ಬಸವರಾಜು, ಸಣ್ಣ ಕುಮಾರ, ಚಾ.ಶಿವಕುಮಾರ್, ಜವರಯ್ಯ, ಉಮೇಶ್, ಶಿವರಾಜು, ಚನ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net