

ಚಿತ್ರದುರ್ಗ: ಅಂತಾರಾಜ್ಯ ಶ್ರೀಗಂಧ ಕಳ್ಳತನ ಸಂಬಂಧ ಆರು ಮಂದಿ ಆರೋಪಿಗಳು, 91 ಕೆ.ಜಿ 300 ಗ್ರಾಂ ಶ್ರೀಗಂಧ, 15.5 ಕೆ.ಜಿ ರಕ್ತಚಂದನ, 25 ಕೆ.ಜಿ 400 ಗ್ರಾಂನ 2 ಆನೆ ದಂತ, 34 ಕೆ.ಜಿ 100 ಗ್ರಾಂ ತೂಕದ ಪೆಂಗೋಲಿನ್ ಚಿಪ್ಪುಗಳು, 1.1 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ 2 ಕಾರು, 9 ಮೊಬೈಲ್, ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದ ಆರೋಪಿಗಳಾದ ತರಿಕೆರೆಯ ವಿ.ಚಂದ್ರಶೇಖರ, ಆಂಧ್ರಪ್ರದೇಶದ ಕೊಪ್ಪಂ ನಗರದ ಖಲೀಲ್, ಹೊಸದುರ್ಗ ಗೂಳಿಹಟ್ಟಿ ಭೋವಿಹಟ್ಟಿಯ ಟಿ.ಪ್ರಶಾಂತ, ರಂಗಸ್ವಾಮಿ, ಚಿಕ್ಕಮಗಳೂರು ಜಿಲ್ಲೆ ಆಲದಹಳ್ಳಿ ಗ್ರಾಮದ ಪುನಿತ್‌ನಾಯ್ಕ, ರಾಮಾನಾಯ್ಕ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ಮುಂದುವರೆದಿದೆ ಎಂದರು.
ಶ್ರೀಗಂಧ ಕಳ್ಳತನದ ದೊಡ್ಡ ನೆಟ್‌ವರ್ಕ್ ಇದೆ. ಕರ್ನಾಟಕ, ಪಕ್ಕದ ಆಂಧ್ರಪ್ರದೇಶ ರಾಜ್ಯದಲ್ಲಿ ಜಾಲ ವ್ಯಾಪಿಸಿದೆ. ಇದರ ಪತ್ತೆಗಾಗಿ ವಿವಿಧ ಹಂತಗಳಲ್ಲಿ ತನಿಖೆ ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರಕರಣ ಗಮನಿಸಿದರೆ, ಚಂದ್ರಶೇಖರ ಪ್ರಮುಖ ಆರೋಪಿಯಾಗಿದ್ದು, ಕಳ್ಳತನ ಮಾಡಿದ ಶ್ರೀಗಂಧ ಪಡೆದು ಮಾರಾಟ ಮಾಡುತ್ತಿದ್ದ. ಮರಗಳ ಸಂಗ್ರಹಣೆ, ಪೊಲೀಸರ ದಾಳಿ ಸಾಧ್ಯತೆ ಹಾಗೂ ಸುರಕ್ಷತೆ ಹಿನ್ನೆಲೆಯಲ್ಲಿ ಹಿರಿಯೂರು, ಹೊಸದುರ್ಗದಲ್ಲಿ ಬಾಡಿಗೆ ಮನೆ ಬಳಸಿಕೊಳ್ಳುತ್ತಿದ್ದ. ಇನ್ನುಳಿದ ಆರೋಪಿತರಲ್ಲಿ ಇಬ್ಬರು ಜಿಲ್ಲೆಯ ಯಾವ ಭಾಗದಲ್ಲಿ ಮರಗಳನ್ನು ಬೆಳೆಯಲಾಗಿದೆ ಎಂಬ ಮಾಹಿತಿ ಸಂಗ್ರಹಿಸಿ ನೀಡುವ, ಉಳಿದ ಮೂವರು ಕಟಾವು ಮಾಡುವವರಾಗಿದ್ದಾರೆ. ಸಾಗಾಣೆಯಲ್ಲೂ ಹಲವರು ತೊಡಗಿದ್ದು, ಜಾಲ ದೊಡ್ಡದಿರುವ ಕುರಿತು ಶಂಕೆ ವ್ಯಕ್ತವಾಗಿದೆ ಎಂದು ವಿವರಿಸಿದರು.
ಜಿಲ್ಲಾದ್ಯಂತ ಕಳೆದ 6 ತಿಂಗಳಲ್ಲಿ ಬೆಲೆಬಾಳುವ ಶ್ರೀಗಂಧ ಮರಗಳ ಕಳ್ಳತನ ಸಂಬಂಧ ಹತ್ತಾರು ಪ್ರಕರಣ ದಾಖಲಾಗಿವೆ. ಹೊಳಲ್ಕೆರೆ ತಾಲೂಕಿನ ಕೆರೆಯಾಗಳಹಳ್ಳಿಯ ರೈತ ಕೆ.ಸಿ.ದಿನೇಶ್ ಅವರು ಅ. 22ರಂದು, ನ. 4ರಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ರಾಜ್ಯ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ 8 ಕಡೆ ಚೆಕ್‌ಪೋಸ್ಟ್ ಕೂಡ ತೆರೆಯಲಾಗಿದೆ ಎಂದರು.
ನ. 10ರಂದು ಚಿತ್ರಹಳ್ಳಿ ಗೇಟ್ ಠಾಣೆಯ ಪೊಲೀಸರು ಗಸ್ತಿನಲ್ಲಿರುವಾಗ ಅನುಮಾನಾಸ್ಪದವಾಗಿ ನಿಂತಿದ್ದ ಮಾರುತಿ ಇಕೋ ವಾಹನ ಪರಿಶೀಲಿಸಿದ್ದಾರೆ. ಈ ವೇಳೆ ಅದರೊಳಗಿದ್ದ ವ್ಯಕ್ತಿಗಳು ಇಟ್ಟುಕೊಂಡಿದ್ದ ಆಯುಧಗಳು ಮರಗಳ್ಳತನದ ಉದ್ದೇಶಕ್ಕೆ ಎಂಬ ಅನುಮಾನ ವ್ಯಕ್ತವಾದ ಕಾರಣ ಬಂಧಿಸಿದ್ದಾರೆ. ಒಂದು ಜಾಲ ಪತ್ತೆಯಿಂದ ಬೇರೆ ಜಾಲಗಳ ಪತ್ತೆಗೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಹೊಳಲ್ಕೆರೆ ವೃತ್ತ ನಿರೀಕ್ಷಕ ಎಂ.ಬಿ.ಚಿಕ್ಕಣ್ಣನವರ್, ಪಿಎಸ್‌ಐಗಳಾದ ಕಾಂತರಾಜು, ಸುರೇಶ್, ಸಿಬ್ಬಂದಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಇದ್ದರು.