ಅಂತರಗಂಗೆ ಒತ್ತುವರಿ ತೆರವು ಮಾಡಿ; ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿಗೆ ಸಂಸದ ಮುನಿಸ್ವಾಮಿ ಸೂಚನೆ

24 Klr 03
ಕೋಲಾರದ ಜಿಪಂ ಸಭಾಂಗಣದಲ್ಲಿ ಸಂಸದ ಎಸ್​.ಮುನಿಸ್ವಾಮಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪುರಸತ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಕುರಿತು ನಡೆಸಿದ ಸಭೆ ನಡೆಸಿದರು. ಜಿಲ್ಲಾಧಿಕಾರಿ ವೆಂಕಟ್​ರಾಜಾ, ಜಿಪಂ ಸಿಇಒ ಯುಕೇಶ್​ ಕುಮಾರ್​, ಪೊಬೆಷನರಿ ಐಎಎಸ್​ ಅಧಿಕಾರಿ ವಿನಾಯಕ್​ ನಾರವಾಡೆ ಇದ್ದರು
Published on

ಕೋಲಾರ: ನಗರದ ಇತಿಹಾಸ ಪ್ರಸಿದ್ಧ ಅಂತರಗಂಗೆ ಬೆಟ್ಟದ ತಪ್ಪಲಲ್ಲಿ ಒತ್ತುವರಿಯಾಗಿರುವ ಎರಡೂವರೆ ಎಕರೆ ಜಮೀನು ಹಾಗೂ ನಗರದಿಂದ ಅಂತರಗಂಗೆ ಬೆಟ್ಟಕ್ಕೆ ಹೋಗುವ ರಸ್ತೆ ಬದಿ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಸಂಸದ ಎಸ್​.ಮುನಿಸ್ವಾಮಿ ಜಿಲ್ಲಾಧಿಕಾರಿಗೆ ಸೂಚಿಸಿದರು.


ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪುರಸತ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಕ್ರಮ ಕಟ್ಟಡಗಳನ್ನು ನ. 27ರಂದೇ ಜೆಸಿಬಿ ಮೂಲಕ ತೆರವುಗೊಳಿಸಿ ಪ್ರವಾಸಿ ತಾಣದ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದರು. ಅಂತರಗಂಗೆ ಪುಣ್ಯಕ್ಷೇತ್ರದಲ್ಲಿ ಒತ್ತುವರಿ ನಡೆದಿದ್ದರೂ ನೋಡಿಕೊಂಡು ಸುಮ್ಮನಿದ್ದೀರಿ ಎಂದು ಆಕ್ರೋಶವ್ಯಕ್ತಪಡಿಸಿ, ತೇರಹಳ್ಳಿ ಬೆಟ್ಟದ ಮೇಲೆ ಆದ ಒತ್ತುವರಿಯನ್ನು ಕೂಡ ತೆರವುಗೊಳಿಸಬೇಕು. ಈಗಾಗಲೇ ಅಕ್ರಮ ಮದರಸಾಗಳು ತಲೆಯೆತ್ತಿವೆ ಹಾಗೂ ಬಾಂಗ್ಲಾದೇಶದವರು ಅಕ್ರಮವಾಗಿ ನೆಲೆಸಿದ್ದಾರೆಂಬ ಸುದ್ದಿಯಿದೆ. ಇವುಗಳಿಗೆಲ್ಲ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.


ಫಲಾನುಭವಿಗಳ ಮಾಹಿತಿ ನೀಡಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕಿದೆ. ಇನ್ನು ಮುಂದೆ ಗ್ರಾಪಂವಾರು ಪ್ರವಾಸ ಕೈಗೊಳ್ಳುತ್ತೇನೆ. ಮೂರು ವರ್ಷದ ಅವಧಿಯಲ್ಲಿ ಆದ ಪ್ರತಿಯೊಂದು ಕಾಮಗಾರಿ ಹಾಗೂ ಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಿದರು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಯೋಜನೆಗಳಿಂದ ಪ್ರಯೋಜನ ಪಡೆದ ಲಾನುಭವಿಗಳನ್ನು ಒಂದು ಕಡೆ ಸೇರಿಸಿ ಕಾರ್ಯಕ್ರಮ ಮಾಡಬೇಕು. ಫಲಾನುಭವಿಗಳು ಪಡೆದಿರುವ ಸೌಲಭ್ಯಗಳು ಹಾಗೂ ಇಲಾಖೆಯ ಸೌಲಭ್ಯಗಳ ನಾಮಫಲಕಗಳನ್ನು ಹಾಕಬೇಕು ಎಂದರು.


ಮೀನುಗಾರಿಕೆ ಇಲಾಖೆ ಅಧಿಕಾರಿ ಪೆದ್ದಪ್ಪ ಮಾಹಿತಿ ನೀಡಿ, ಮಾರ್ಕಂಡೇಯ ಜಲಾಶಯ, ಬೇತಮಂಗಲ ಜಲಾಶಯಗಳಲ್ಲಿ ಮೀನು ಸಾಕಣಿಕೆ ವ್ಯವಸ್ಥೆ ಇದೆ.
ಈಗ ಅವಧಿ ಪೂರ್ಣಗೊಂಡಿದ್ದು ಟೆಂಡರ್​ ಕರೆಯಬೇಕಿದೆ ಎಂದು ಸಭೆಗೆ ತಿಳಿಸಿದಾಗ, ಮೀನು ಮರಿ ಸಾಕಣೆ ಮಾಡಲು ಮೀನುಗಾರಿಕೆ ಇಲಾಖೆಗೆ ಸಾಧ್ಯವಾಗದಿದ್ದರೆ, ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸಿಕೊಡಿ ಎಂದು ಸಂಸದರು ಸೂಚಿಸಿದರು.

ನಿವೇಶನ ಖಾತೆಗಳು ವಿಚಾರಣೆ ಹಂತದಲ್ಲಿವೆ: ಪೌರಾಯುಕ್ತೆ ಸುಮಾ ಮಾಹಿತಿ ನೀಡಿ, ವರ್ಷದಿಂದ 500 ನಿವೇಶನ ಖಾತೆ ತೆರೆಯುವುದರ ಬಗ್ಗೆ ವಿಚಾರಣಾ ಹಂತದಲ್ಲಿದೆ. 1996 -97ರ ಅವಧಿಯಲ್ಲಿ ನಗರಸಭೆಗೆ ನಗರದ ಸುತ್ತಮುತ್ತಲ ಹಳ್ಳಿಗಳು ಸೇರ್ಪಡೆಯಾದಾಗ ಗ್ರಾಪಂಗಳಿಂದ 10 ಸಾವಿರ ಖಾತೆಗಳು ನಗರಸಭೆಗೆ ವರ್ಗಾವಣೆಯಾಗಿವೆ. ಈ ಖಾತೆಗಳು ಬಾಕಿ ಹಂತದಲ್ಲಿವೆ ಎಂದರು.


ನಗರದ ಅಭಿವೃದ್ಧಿಗೆ ವರದಿ ಕೊಡಿ: ಕೋಲಾರ ನಗರಸಭೆ ಕಾರ್ಪೋರೇಷನ್​ ಆಗಿ ಬದಲಾಗಬೇಕು. ಸುತ್ತಲಿನ ಅಮ್ಮೇರಹಳ್ಳಿ, ಟಮಕ, ಅರಹಳ್ಳಿ, ಛತ್ರಕೋಡಿಹಳ್ಳಿ, ಎಲ್ಲ ಸೇರಿಸಿ ಎಷ್ಟು ಜನಸಂಖ್ಯೆ ಇದ್ದಾರೆ ಎಂದು ಅಧ್ಯಯನ ನಡೆಸಿ ವರದಿ ಕೊಡಿ ಎಂದು ಸೂಚಿಸಿದರು. ನಗರಸಭೆ ಸಾಮಾನ್ಯ ಸಭೆ ನಡೆಸಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ವರದಿ ನೀಡಿ, ನಗರಸಭೆ ಕಚೇರಿ ಕುರಿ ಕೊಟ್ಟಿಗೆ ಇದ್ದಂತಿದೆ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದಾಗ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಆಯುಕ್ತೆ ಸುಮಾ ಮಾಹಿತಿ ನೀಡಿದರು.


ಅರಣ್ಯ ಇಲಾಖೆಯ ಸಾವಿರಾರು ಎಕರೆ ಜಾಗ ಒತ್ತುವರಿ ಆಗಿದ್ದರೂ ಸುಮ್ಮನಿದ್ದೀರಿ. ಆದರೆ ನಗರದಲ್ಲಿ ಯರಗೋಳ್​ ಕುಡಿಯುವ ನೀರಿನ ಟ್ಯಾಂಕ್​ ಕಟ್ಟಿದರೆ ಮುಚ್ಚುತ್ತೀರಿ ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಂಸದರು ಕುಡಿಯುವ ನೀರಿನ ಪೈಪ್​ಲೈನ್​ಗೆ ಅಡ್ಡಿಪಡಿಸಿದರೆ ನಾನೇ ನಿಂತುಕೊಂಡು ಹಾಕಿಸುತ್ತೇನೆ. ಅರಣ್ಯ ಭೂಮಿಯನ್ನು ಕಬಳಿಸಿರುವ ಜಾಗವನ್ನು ತೋರಿಸುತ್ತೇನೆ. ಆಗ ಏನು ಮಾಡುತ್ತೀರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಕನ್ನಡಕ್ಕೆ ಆದ್ಯತೆ ನೀಡಿ: ಇನ್ನು ಮುಂದೆ ಇಲಾಖಾವಾರು ಪ್ರಗತಿ ವರದಿ ಸೇರಿದಂತೆ ಜಿಲ್ಲಾಧಿಕಾರಿಗಳು ನೀಡುವ ವರದಿಗಳು ಕನ್ನಡದಲ್ಲೇ ಇರಬೇಕು. ಪ್ರತಿಯೊಬ್ಬ ಸಾಮಾನ್ಯ ಪ್ರಜೆಯು ಕನ್ನಡದಲ್ಲಿ ಓದುವಂತೆ ಸರಳವಾಗಿ ಇರಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಹೇಗೆ ಎಂದು ಮುನಿಸ್ವಾಮಿ ಪ್ರಶ್ನಿಸಿದರು.

3 ಕೋಟಿ ರೂ. ನೀರಿನ ಶುಲ್ಕ ಬಾಕಿ: ನಗರ ವ್ಯಾಪ್ತಿಯಲ್ಲಿ 35 ಸಾವಿರ ಖಾತೆಗಳಿದ್ದು, ಶೇ.30 ಜನರು ತೆರಿಗೆ ಪಾವತಿಸುತ್ತಿದ್ದಾರೆ. ನೀರಿನ ಬಳಕೆ ಶುಲ್ಕ 3 ಕೋಟಿ ರೂ. ಬಾಕಿ ಇದೆ. ನಗರಸಭೆ ಶುಲ್ಕ ಮನ್ನಾ ಮಾಡಲು ಪ್ರಯತ್ನಿಸಿತ್ತು. ಆದರೆ ಇದೀಗ ವಸೂಲು ಮಾಡಲು ಸಿಬ್ಬಂದಿ ಕೊರತೆ ಕಾಡುತ್ತಿದೆ ಎಂದು ಪೌರಾಯುಕ್ತೆ ಸುಮಾ ತಿಳಿಸಿದರು. ನೀರು ಸರಬರಾಜಿನ ಬಾಕಿ ಇರುವ ಬಿಲ್​ ಅನ್ನು ಮನ್ನಾ ಮಾಡುವ ಅಧಿಕಾರ ಅಧ್ಯಕ್ಷರಿಗಿಲ್ಲ. ಬಿಬಿಎಂಪಿಯಲ್ಲೇ ಇಲ್ಲ ಎಂದು ಮುನಿಸ್ವಾಮಿ ಉತ್ತರಿಸಿ, ಶೇ.30 ರಷ್ಟು ಮಾತ್ರ ತೆರಿಗೆ ಪಾವತಿಸಿದರೆ ಕೋಲಾರ ಅಭಿವೃದ್ಧಿ ಆಗುವುದು ಯಾವಾಗ? ಎಂದು ಪ್ರಶ್ನಿಸಿದರು. ತೆರಿಗೆ ಬಾಕಿದಾರರ ಪಟ್ಟಿ ಮಾಡಿ ಗುರಿ ನಿಗದಿ ಮಾಡಿ, ಶಿಬಿರ ನಡೆಸಿ, ಯಾರ ಪ್ರಭಾವಕ್ಕೂ ಒಳಗಾಗದೆ ಬೋಗಸ್​ ಮಾಡುವವರನ್ನು ಪತ್ತೆ ಹಚ್ಚಿ ತೆರಿಗೆ ಸಂಗ್ರಹಿಸಿ ಎಂದು ತಾಕೀತು ಮಾಡಿದರು.

ವರ್ಗಾವಣೆಗೆ ಹೆದರಿದಿರಿ: ನಿಮ್ಮ ವರ್ಗಾವಣೆಗೆ ಯೋಜನೆ ನಡೆಯುತ್ತಿದ್ದು, ಇದಕ್ಕೆ ನೀವು ಹೆದರುವ ಅಗತ್ಯ ಇಲ್ಲ. ನೀವು ಕಾಸು ಪಡೆಯಲ್ಲ ಹಣ ಪೋಲಾಗಲು ಬಿಡಲ್ಲ. ಎಷ್ಟು ಮಂದಿ ಕೆಲಸ ಮಾಡುತ್ತಾರೆ? ಎಷ್ಟು ವಾಹನ ಇವೆ ಇತ್ಯಾದಿ ಪ್ರತಿಯೊಂದೂ ಮಾಹಿತಿ ಕೊಡಬೇಕು. ಡೀಸೆಲ್​ ಅಕ್ರಮ ಹಿಡಿಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಕ್ರಮ ಖಾತೆಗಳನ್ನು ಮಾಡಿಸಲು ಸದಸ್ಯರು ಒತ್ತಡ ಹೇರುತ್ತಾರೆ. ನೀವು ಬಗ್ಗಬೇಡಿ. ನಾನು ಪ್ರತಿ ವಾರ್ಡ್​ಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಮಾಹಿತಿ ಕೇಳಿದಾಗ ಅಕ್ರಮ ಖಾತೆಗಳು ಹೊರಬೀಳುತ್ತವೆ. ಸಮಗ್ರ ವರದಿ ತಯಾರಿಸಿ ಎಂದು ಆಯುಕ್ತೆಗೆ ಸಂಸದರು ಸೂಚಿಸಿದರು. ನಗರವನ್ನು ಹಾಳು ಮಾಡಿದ ಮಹಾನುಭಾವ ಒಬ್ಬರಿದ್ದಾರೆ ಅವರ ಇತಿಹಾಸವನ್ನು ಬಿಚ್ಚಿಡುತ್ತೇನೆ ಎಂದು ಮಾಜಿ ಅಧ್ಯಕ್ಷ ಮುಬಾರಕ್​ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net