ಅಂಗನವಾಡಿ ಮಕ್ಕಳಿಗಾಗಿ ಬಾಲಮೇಳ ಆಯೋಜನೆ ಚಿಂತನೆ

5 nrp 3 anganvadi
ಎನ್.ಆರ್.ಪುರ ಮೇದರಬೀದಿ ಅಂಗನವಾಡಿಯಲ್ಲಿ ಬಾಲಮೇಳ ಕಾರ್ಯಕ್ರಮ ನಡೆಯಿತು. ಸುರಯ್ಯಬಾನು, ಪ್ರಶಾಂತ್ ಎಲ್.ಶೆಟ್ಟಿ, ಕಾವ್ಯಶ್ರೀ, ಮೀರಾ ಸುಬ್ರಹ್ಮಣ್ಯ ಶೆಟ್ಟಿ, ಅನಿತಾ, ಶೈಲಾ, ಶ್ಯಾಮಲಾ, ಆಶಾ ಇದ್ದರು.
Published on

ಎನ್.ಆರ್.ಪುರ: ಪಟ್ಟಣ ವ್ಯಾಪ್ತಿಯ ಎಲ್ಲ ಅಂಗನವಾಡಿ ಮಕ್ಕಳನ್ನು ಒಗ್ಗೂಡಿಸಿ ನಿರ್ದಿಷ್ಟ ಜಾಗದಲ್ಲಿ ಬಾಲಮೇಳ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಹೇಳಿದರು.

ಪಟ್ಟಣದ ಮೇದರಬೀದಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಬಾಲಮೇಳ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ಮಕ್ಕಳಿಗೂ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ದೊರಕುತ್ತವೆ. ಆದರೆ ಅಂಗನವಾಡಿ ಮಕ್ಕಳಿಗೆ ದೊರಕುವುದಿಲ್ಲ. ಈ ನಿಟ್ಟಿನಲ್ಲಿ ಪಪಂಯಿಂದ ಬಾಲಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.

ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಕಾವ್ಯಶ್ರೀ ಮಾತನಾಡಿ, ಕೋವಿಡ್ ಬರುವ ಹಿಂದೆ ಸರ್ಕಾರ ಅಂಗನವಾಡಿ ಮಕ್ಕಳಿಗೆ ಬಾಲಮೇಳ ಕಾರ್ಯಕ್ರಮ ಆಯೋಜಿಸುತ್ತಿತ್ತು. ಆದರೆ ಕೋವಿಡ್ ನಂತರ ಈ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಕಾರ್ಯಕ್ರಮಕ್ಕೆ ಸರ್ಕಾರ ಯಾವುದೇ ಅನುದಾನವನ್ನೂ ನೀಡುವುದಿಲ್ಲ. ಆದರೆ ಈ ಅಂಗನವಾಡಿ ಕಾರ್ಯಕರ್ತೆ ಸ್ವಂತ ಹಣದೊಂದಿಗೆ, ದಾನಿಗಳ ಸಹಕಾರದಿಂದ, ಇರುವಷ್ಟು ಅಂಗನವಾಡಿ ಜಾಗದಲ್ಲಿ ಅನುದಾನದ ಕ್ರೋಢಿಕರಣ ಮಾಡಿ ಬಾಲಮೇಳ ಕಾರ್ಯಕ್ರಮ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಈ ಅಂಗನವಾಡಿ ಇತರ ಅಂಗನವಾಡಿ ಕೇಂದ್ರಗಳಿಗೆ ಮಾದರಿಯಾಗಿದೆ. ಮುಂದೆ ತಾಲೂಕು ಮಟ್ಟದ ಬಾಲಮೇಳ ಕಾರ್ಯಕ್ರಮ ಆಯೋಜಿಸುವ ಬಗ್ಗೆಯೂ ಚಿಂತಿಸಲಾಗುವುದು ಎಂದರು.

ಪಪಂ ಅಧ್ಯಕ್ಷೆ ಸುರಯ್ಯಬಾನು ಮಾತನಾಡಿ, ಅಂಗನವಾಡಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಪುಣ್ಯದ ಕೆಲಸ ಎಂದರು. ಕಾರ್ಯಕ್ರಮದಲ್ಲಿ ರಾಜೀವ್ ನಗರದ ಅಂಗನವಾಡಿ ಮಕ್ಕಳೂ ಪಾಲ್ಗೊಂಡಿದ್ದರು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಮೀರಾ ಸುಬ್ರಹ್ಮಣ್ಯಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರಾದ ಅನಿತಾ, ಶ್ಯಾಮಲಾ, ಶೈಲಾ, ಅಂಗನವಾಡಿ ಸಹಾಯಕಿ ಆಶಾ, ಅಶ್ರಿತ ಡಿ. ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net