ಝೈಡಸ್​ ಕಂಪನಿಯ ಕರೊನಾ ಮಾತ್ರೆ ಡೆಸಿಡ್ಯುಸ್ಟ್ಯಾಟ್​ ಮೆಕ್ಸಿಕೋದಲ್ಲಿ ಪರೀಕ್ಷೆ

desidustat
Published on

ನವದೆಹಲಿ: ಅಹಮದಾಬಾದ್​ ಮೂಲದ ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಸಂಸ್ಥೆ ಕೋವಿಡ್​-19 ಚಿಕಿತ್ಸೆಗಾಗಿ ಡೆಸಿಡ್ಯುಸ್ಟ್ಯಾಟ್​ ಎಂಬ ಮಾತ್ರೆಯನ್ನು ಅಭಿವೃದ್ಧಿಪಡಿಸಿದೆ. ಈ ಮಾತ್ರೆಯ Phase III ಟ್ರಯಲ್ಸ್​ಗಾಗಿ ಮೆಕ್ಸಿಕೋ ಸರ್ಕಾರ ಅನುಮತಿ ನೀಡಿದೆ.

ಮೆಕ್ಸಿಕೋದ ಅವಾಂತ್​ ಸಾಂಟೆ ರಿಸರ್ಚ್​ ಸೆಂಟರ್​ನಲ್ಲಿ ಡೆಸಿಡ್ಯುಸ್ಟ್ಯಾಟ್​ ಗುಳಿಗೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಝೈಡಸ್​ ಕ್ಯಾಡಿಲಾ ತಿಳಿಸಿದೆ.

ಕರೊನಾ ಸೋಂಕಿಗೆ ತುತ್ತಾಗಿರುವವರಿಗೆ 100 ಎಂಜಿ ಡೆಸಿಡ್ಯುಸ್ಟ್ಯಾಟ್​ ಮಾತ್ರೆಗಳನ್ನು 14 ದಿನ ಕೊಟ್ಟು, ಅದರ ಪರಿಣಾಮ ಮತ್ತು ಸುರಕ್ಷತೆಯ ಕುರಿತು ಅಧ್ಯಯನ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಝೈಡಸ್​ ಕ್ಯಾಡಿಲಾದ ಚೇರ್ಮನ್​ ಪಂಕಜ್​ ಆರ್​ ಪಟೇಲ್​, ಝೈಡಸ್​ನಲ್ಲಿ ನಾವು ಕೋವಿಡ್​-19 ಪಿಡುಗಿನ ವಿರುದ್ಧದ ಹೋರಾಟವನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದಿದ್ದೇವೆ. ಇದಕ್ಕಾಗಿ ನಾವು ಔಷಧಗಳು, ಡಯಾಗ್ನಾಸ್ಟಿಕ್ಸ್​ ಮತ್ತು ರೋಗನಿರೋಧಕ ಚುಚ್ಚುಮದ್ದುಗಳನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಶ್ರಮಿಸುತ್ತಿದ್ದೇವೆ. ಈ ಶ್ರಮದ ಭಾಗವಾಗಿ ಸಿದ್ಧವಾಗಿರುವುದು ಡೆಸಿಡ್ಯುಸ್ಟ್ಯಾಟ್​ ಮಾತ್ರೆಗಳು. ಇದನ್ನು ಈಗ ನಾವು ಮೂರನೇ ಹಂತದ ಪ್ರಯೋಗಕ್ಕೆ ಒಳಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಝೈಡಸ್​ ಕ್ಯಾಡಿಲಾ ಸಂಸ್ಥೆ ಕಳೆದ ವಾರ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್​-19 ಲಸಿಕೆ ಝೈಕೋವ್​-ಡಿ ಅನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡಿರುವುದಾಗಿ ಹೇಳಿತ್ತು. ಈ ಪರೀಕ್ಷೆಗಳು ಇನ್ನಷ್ಟೇ ಆರಂಭವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net