

Zubeen Garg's Death: ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ನಿಧನರಾದ ಅಸ್ಸಾಂನ ಪ್ರಸಿದ್ಧ ಗಾಯಕ ಜುಬೀನ್ ಗಾರ್ಗ್ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ಸೆ 19) ಸಂತಾಪ ಸೂಚಿಸಿದ್ದಾರೆ. ಜನಪ್ರಿಯ ಗೀತೆ 'ಯಾ ಅಲಿ'ಗೆ ಹೆಸರುವಾಸಿಯಾಗಿದ್ದ ಗಾರ್ಗ್ 52 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಜನಪ್ರಿಯ ಗಾಯಕ ಜುಬೀನ್ ಗಾರ್ಗ್ ಅವರ ಹಠಾತ್ ನಿಧನದಿಂದ ಆಘಾತವಾಗಿದ್ದು. ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಅವರನ್ನು ಸ್ಮರಿಸಲಾಗುವುದು, ಅವರ ಗಾಯನಗಳು ಎಲ್ಲಾ ವಯೋಮಾನದ ಜನರಿಂದ ಮೆಚ್ಚುಗೆ ಪಡೆದಿದ್ದವು, ಗಾರ್ಗ್ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಬರೆದಿದ್ದಾರೆ.
ಗಾಯಕನ ಸಾವಿನ ಸುದ್ದಿ ತಿಳಿದ ನಂತರ, ಗಾರ್ಗ್ ಅವರ ಕುಟುಂಬದ ಸ್ನೇಹಿತರು ಮತ್ತು ಅಭಿಮಾನಿಗಳು ಗುವಾಹಟಿಯಲ್ಲಿರುವ ಅವರ ನಿವಾಸದ ಹೊರಗೆ ಜಮಾಯಿಸಲು ಪ್ರಾರಂಭಿಸಿದರು ಎಂದು ವರದಿಯಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಜುಬೀನ್ ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳಲು ಭಾರತದ ಹೈಕಮಿಷನರ್ ಡಾ. ಶಿಲ್ಪಕ್ ಅಂಬುಲೆ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಪ್ರೀತಿಯ ಜುಬೀನ್ ಅವರ ಪಾರ್ಥಿವ ಶರೀರವನ್ನು ಅಸ್ಸಾಂಗೆ ಆದಷ್ಟು ಬೇಗ ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಮನ್ವಯ ಸಾಧಿಸುತ್ತಿದ್ದೇವೆ. ಪ್ರಕ್ರಿಯೆಯು ಅಂತಿಮಗೊಂಡ ತಕ್ಷಣ, ನಾನು ಸಂಬಂಧಪಟ್ಟ ವಿಷಯಗಳನ್ನು ಹಂಚಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.
ಸೆ. 20ರಂದು ನಡೆಯುವ ಈಶಾನ್ಯ ಸಂಗೀತ ಉತ್ಸವದಲ್ಲಿ ತಮ್ಮ ಪ್ರದರ್ಶನ ನೀಡಲು ಜುಬೀನ್ ಗಾರ್ಗ್ ಸಿಂಗಾಪುರದಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಸ್ಕೂಬಾ ಡೈವಿಂಗ್ ಅಪಘಾತ ನಡೆದಿದ್ದು, ತಕ್ಷಣ ಪೊಲೀಸರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ವಿಧಿಯಾಟ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಜುಬೀನ್ ಗಾರ್ಗ್ ನಿಧನದ ಸುದ್ದಿ ಧೃಢಪಡಿಸಿರುವ ಈಶಾನ್ಯ ಭಾರತ ಉತ್ಸವದ ಪ್ರತಿನಿಧಿ ಅನುಜ್ ಕುಮಾರ್ ಬೊರುವಾ, ಗಾರ್ಗ್ ಅವರ ನಿಧನದ ಸುದ್ದಿಯನ್ನು ಹಂಚಿಕೊಳ್ಳಲು ನಮಗೆ ತುಂಬಾ ದುಃಖವಾಗುತ್ತಿದೆ. ಸ್ಕೂಬಾ ಡೈವಿಂಗ್ ಮಾಡುವಾಗ ಅವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ತಕ್ಷಣವೇ ಸಿಪಿಆರ್ ನೀಡಿ ಸಿಂಗಾಪುರ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅವರನ್ನು ಉಳಿಸಲು ಪ್ರಯತ್ನಿಸಿದರೂ, ಉಳಿಯಲಿಲ್ಲ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)