ಶೀಘ್ರ ಆಯೋಗಕ್ಕೆ ಜಿಪಂ, ತಾಪಂ ಮೀಸಲಾತಿ ಪಟ್ಟಿ

Priyank Kharge
Published on

ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಚುನಾವಣಾ ಆಯೋಗಕ್ಕೆ ಕಳುಹಿಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪರಿಷತ್‌ನಲ್ಲಿ ಬಿಜೆಪಿಯ ಡಿ.ಎಸ್. ಅರುಣ್ ಹಾಗೂ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರು ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆಸುವಂತೆ ಸರ್ಕಾರದ ಗಮನ ಸೆಳೆದರು. ಈ ವೇಳೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ ಚುನಾವಣೆಗೆ ಇದ್ದ ತೊಡಕುಗಳು ಒಂದೊಂದಾಗಿ ನಿವಾರಣೆಯಾಗಿದ್ದು, ಮೀಸಲಾತಿ ಪ್ರಕಟಿಸುವ ಹಂತಕ್ಕೆ ಬಂದಿದೆ. ಮೀಸಲಾತಿ ಪ್ರಶ್ನಿಸದೆ ಇದ್ದರೇ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ರವಾನೆ ಮಾಡಿ ಶೀಘ್ರದಲ್ಲೆ ಚುನಾವಣೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿಗಳಿಗೆ 2020ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ 2021ರ ಜನವರಿ-ೆಬ್ರವರಿಯಲ್ಲಿ ಚುನಾವಣೆ ನಡೆಸಿ ಆಯ್ಕೆ ಮಾಡಲಾಗಿತ್ತು. ಈ ಅವಧಿ 2026ರ ಜನವರಿ-ೆಬ್ರವರಿಯಲ್ಲಿ ಮುಗಿಯಲಿದ್ದು, ಆನಂತರ ಚುನಾವಣೆ ನಡೆಸಲಾಗುತ್ತದೆ. ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ ಎಂದರು.

ಇದೇ ವೇಳೆ ಡಿ.ಎಸ್. ಅರುಣ್ ಮತ್ತು ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಗ್ರಾಪಂ ಸದಸ್ಯರ ಗೌರವ ಧನ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಹಣಕಾಸು ಇಲಾಖೆಗೆ ಪ್ರಸ್ತಾವನೆ ತಿರಸ್ಕರಿಸಿದ್ದು, ಸಿಎಂ ಗಮನಕ್ಕೆ ತಂದು ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು.

ಗ್ರಾ.ಪಂ ಚುನಾವಣೆಗೂ ಪಕ್ಷದ ಚಿಹ್ನೆ

ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಕೇರಳ ಮಾದರಿ ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಸಬೇಕೆಂದು ಸದಸ್ಯರು ವಿಷಯ ಪ್ರಸ್ತಾಪ ಮಾಡಿದರು. ಆಗ ಸಚಿವ ಪ್ರಿಯಾಂಕ್ ಖರ್ಗೆ, ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಕಾಯ್ದೆಗೆ ತಿದ್ದುಪಡಿ ತರಬೇಕಾ ಅಥವಾ ನೇರ ಮಾಡಬಹುದಾ? ಎಂದು ವರದಿ ಪಡೆಯಲು ಸಮಿತಿ ರಚನೆ ಮಾಡುವ ಬಗ್ಗೆಯೂ ಚಿಂತನೆಗಳು ನಡೆದಿದೆ. ಶೀಘ್ರದಲ್ಲಿಯೇ ಸದಸ್ಯರ ಸಭೆ ಕರೆದು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವಧನ ಹೆಚ್ಚಿಸುವ ಅಗತ್ಯವಿದೆ. ಬಹಳ ಕಾಲದಿಂದ ಪರಿಷ್ಕರಣೆ ಆಗಿಲ್ಲ. ಈಗಲಾದರೂ ಸರ್ಕಾರ ಗಮನಹರಿಸಬೇಕು.

- ಸಲೀಂ ಅಹ್ಮದ್, ಆಡಳಿತ ಪಕ್ಷದ ಮುಖ್ಯ ಸಚೇತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net