ಜಿಲ್ಲಾ ಪಂಚಾಯಿತಿ ಅವಧಿ ಮುಕ್ತಾಯ: ನಾಳೆಯಿಂದ ಆಡಳಿತಾಧಿಕಾರಿ ದರ್ಬಾರ್ ಸದ್ಯಕ್ಕಿಲ್ಲ ಚುನಾವಣೆ

ZP
Published on

ರಾಮನಗರ :  ರಾಮನಗರ ಜಿಲ್ಲೆಯಾದ ನಂತರ ಅಸ್ತಿತ್ವಕ್ಕೆ ಬಂದ ಎರಡನೇ ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳ ಆಡಳಿತ ಅವಧಿ ಬುಧವಾರಕ್ಕೆ ಪೂರ್ಣಗೊಂಡಿದ್ದು, ಆಡಳಿತಾಧಿಕಾರಿ ಕಾರ್ಯಭಾರ ಆರಂಭಗೊಂಡಿದೆ.

2007ರಲ್ಲಿ ಅಸ್ತಿತ್ವಕ್ಕೆ ಬಂದ ಜಿಲ್ಲೆ ಅಲ್ಪ ಅವಧಿಯ ಮೊದಲ ಜಿಲ್ಲಾ ಪಂಚಾಯಿತಿಯನ್ನು ಹೊಂದಿತ್ತು. ಇದಾದ ನಂತರ 2011ರಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಜಿಪಂ 5 ವರ್ಷ ಪೂರ್ಣಗೊಂಡ ನಂತರ 2016ರ ಏ.29ಕ್ಕೆ ಎರಡನೇ ಪೂರ್ಣ ಅವಧಿಯ ಜಿಪಂ ಅಸ್ತಿತ್ವಕ್ಕೆ ಬಂದು, ಇದೀಗ ಏ.28ಕ್ಕೆ ತನ್ನ 5 ವರ್ಷಗಳ ಆಡಳಿತ ಪೂರ್ಣಗೊಳಿಸಿದೆ.

ಮಿಶ್ರ ಅಧಿಕಾರ: 2016ರಲ್ಲಿ ನಡೆದ 22 ಸದಸ್ಯ ಬಲದ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ 16 ಮತ್ತು ಜೆಡಿಎಸ್ 6 ಸ್ಥಾನ ಪಡೆದುಕೊಂಡಿದ್ದವು. ಈ ವೇಳೆ ಕಾಂಗ್ರೆಸ್ ನೇರವಾಗಿ ಅಧಿಕಾರ ಹಿಡಿದಿತ್ತಾದರೂ ನಂತರ ಆದ ಬೆಳವಣಿಯಿಂದ ಯಾವ ಸದಸ್ಯರು ಯಾವ ಪಕ್ಷದಲ್ಲಿ ಇದ್ದಾರೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲು ಸಾಧ್ಯವಾಗದಂತೆ ಆಯಿತು. ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರುತ್ತಿದ್ದಂತೆ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿ ಅಧ್ಯಕ್ಷರೂ ಆಗಿದ್ದ ಸಿ.ಪಿ.ರಾಜೇಶ್ ಬಿಜೆಪಿ ಪಾಳಯದಲ್ಲಿ ಗುರ್ತಿಸಿಕೊಂಡರು. ನಂತರ ಮಾಗಡಿಯಲ್ಲಿ ಬಾಲಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಂತೆ ಅವರ ಸಹೋದರ ಎಚ್.ಎನ್.ಅಶೋಕ್ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದರೂ ಕಾಂಗ್ರೆಸ್ ಪಾಳಯದಲ್ಲಿ ಗುರ್ತಿಸಿಕೊಂಡು ಅಧ್ಯಕ್ಷರಾದರು. ಹೀಗೆ ಇಡೀ 5 ವರ್ಷದ ಅವಧಿಯು ಮೂರು ಪಕ್ಷಗಳ ಮಿಶ್ರ ಆಡಳಿತಕ್ಕೆ ಕನ್ನಡಿಯಾಗಿ ಇತ್ತು.

ಉಪಚುನಾವಣೆ : ಈ ಬಾರಿ ಕುದೂರು ಜಿಪಂ ಕ್ಷೇತ್ರಕ್ಕೆ ಉಪಚುನಾವಣೆೆ ನಡೆದದ್ದು ವಿಶೇಷ. ಮಾಗಡಿ ಶಾಸಕ ಎ.ಮಂಜುನಾಥ್ ಕುದೂರು ಕ್ಷೇತ್ರದಿಂದ ಜೆಡಿಎಸ್ ಸದಸ್ಯರಾಗಿ ಗೆಲುವು ಸಾಧಿಸಿದ್ದರು. ಅಲ್ಲದೆ, ಜಿಪಂ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿಟ್ಟಿದ್ದರು. ಆದರೆ ಅಂದು ನಡೆದ ರಾಜಕೀಯ ಹೊಂದಾಣಿಕೆಯಲ್ಲಿ ಎ.ಮಂಜುನಾಥ್ ಅವರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿತು. ಇದರಿಂದ ಬೇಸರದಿಂದಿದ್ದ ಮಂಜುನಾಥ್, ನಂತರ ಎದುರಾದ ಮಾಗಡಿ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆದರೆ ಚುನಾವಣೆಗೂ ಮುನ್ನ ಎ.ಮಂಜುನಾಥ್ ತಮ್ಮ ಜಿಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಎದುರಾದ ಉಪಚುನಾವಣೆಯಲ್ಲಿ ಎ.ಮಂಜುನಾಥ್ ಎದುರೇ ಜಿಪಂ ಚುನಾವಣೆಯಲ್ಲಿ ಸೋಲುಕಂಡಿದ್ದ ಅಣ್ಣೇಗೌಡ ಮತ್ತೆ ಕಣಕ್ಕಿಳಿದರು. ಇವರ ಅವಿರೋಧ ಆಯ್ಕೆಗೆ ಪ್ರಯತ್ನಗಳು ನಡೆದರೂ ಒಬ್ಬ ಅಭ್ಯರ್ಥಿ ಕಣದಲ್ಲಿ ಉಳಿದ ಕಾರಣ ಎದುರಾದ ಚುನಾವಣೆಯಲ್ಲಿ ಅಣ್ಣೇಗೌಡ ಗೆಲುವು ಸಾಧಿಸಿದರು.

ಅಧಿಕಾರ ಹಂಚಿಕೆ ಸೂತ್ರ : 5 ವರ್ಷಗಳ ಆಡಳಿತ ಒಬ್ಬರೇ ಅಧ್ಯಕ್ಷರು, ಉಪಾಧ್ಯಕ್ಷರ ಕೈಯಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಜಾರಿಗೆ ತಂದ ನಿಯಮಗಳು ಕೇವಲ ಕಾಗದಕ್ಕೆ ಸೀಮಿತವಾದವು. 5 ವರ್ಷಗಳ ಅವಧಿಯಲ್ಲಿ 4 ಮಂದಿ ಅಧ್ಯಕ್ಷರಾದರೆ, ಅಷ್ಟೇ ಮಂದಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ವಿಶೇಷ. ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಮೊದಲಿಗೆ ಸಿ.ಪಿ.ರಾಜೇಶ್ ಅಧ್ಯಕ್ಷರಾಗಿ, ದಿವ್ಯಾ ಗಂಗಾಧರ್ ಉಪಾಧ್ಯಕ್ಷೆಯಾಗಿ ಆಡಳಿತ ನಡೆಸಿದರು. ಇವರಿಂದ ರಾಜೀನಾಮೆಯನ್ನು ಕೊಡಿಸಿ ಎಂ.ಎನ್.ನಾಗರಾಜು ಅಧ್ಯಕ್ಷರಾದರೆ, ವೀಣಾಕುಮಾರಿ ಉಪಾಧ್ಯಕ್ಷೆಯಾಗಿ ದುಡಿದರು. ಇವರ ರಾಜೀನಾಮೆ ಪಡೆದು ಎಚ್.ಬಸಪ್ಪ ಅಧ್ಯಕ್ಷರಾಗಿ ಮಾತ್ತು ಉಷಾ ರವಿ ಉಪಾಧ್ಯಕ್ಷರಾದರು. ಅಂತಿಮವಾಗಿ ಎಚ್.ಎನ್.ಅಶೋಕ್ ಹಾಗು ಜಯರತ್ನ ರಾಜೇಂದ್ರ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷೆ ಹುದ್ದೆಯನ್ನು ಅಲಂಕರಿಸಿದರು.

ಆಡಳಿತಾಧಿಕಾರಿ ನೇಮಕ :  ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಅವಧಿ ಮುಗಿದ ಜಿಲ್ಲಾ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯೇ ಆಡಳಿತಾಧಿಕಾರಿಯಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ಹೊಸ ಜನಪ್ರತಿನಿಧಿಗಳ ಆಡಳಿತ ಬರುವವರೆಗೂ ಆಡಳಿತ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net