Amit Shah | ವಿದೇಶಗಳಿಂದ ಕಾರ್ಯನಿರ್ವಸುತ್ತಿರುವ ಅಪರಾಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆ: ಅಮಿತ್ ಷಾ

Amit Shah 16
Published on

ನವದೆಹಲಿ: ದೇಶದಲ್ಲಿರುವ ಆರ್ಥಿಕ ಅಪರಾಧಿಗಳು, ಸೈಬರ್ ಅಪರಾಧಿಗಳು, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರು ಮತ್ತು ಇತರ ಎಲ್ಲಾ ದೇಶಭ್ರಷ್ಟರನ್ನು ಭಾರತೀಯ ನ್ಯಾಯ ವ್ಯವಸ್ಥೆಯ ಮುಂದೆ ತಂದು ನಿರ್ದಯವಾದ ವಿಧಾನದಲ್ಲಿ ಶಿಕ್ಷಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಗುರುವಾರ (ಅಕ್ಟೋಬರ್,16) ಹೇಳಿದ್ದಾರೆ.

ಈ ಬಗ್ಗೆ ಸಿಬಿಐ ಇಲ್ಲಿ ಆಯೋಜಿಸಿದ್ದ ಪರಾರಿಗೊಳಗಾದವರ ಗಡಿಪಾರು - ಸವಾಲುಗಳು ಮತ್ತು ತಂತ್ರಗಳು ಎಂಬ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಶಾ, ಭ್ರಷ್ಟಾಚಾರ, ಅಪರಾಧ ಮತ್ತು ಭಯೋತ್ಪಾದನೆಯ ವಿರುದ್ಧ ಮಾತ್ರವಲ್ಲದೆ, ಭಾರತದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿರುವ ಅಪರಾಧಿಗಳ ವಿರುದ್ಧವೂ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ಷಾ, ಎಲ್ಲಾ ಪರಾರಿಯಾದವರನ್ನು ಕಾನೂನಿನ ವ್ಯಾಪ್ತಿಗೆ ತರಲು ಮತ್ತು ಇದಕ್ಕಾಗಿ ಒಂದು ನಿರ್ದಿಷ್ಟ ಕಾರ್ಯವಿಧಾನವನ್ನು ಸ್ಥಾಪಿಸಲು ಪ್ರಯತ್ನಿಸಬೇಕು ಎಂದಿದ್ದಾರೆ. ಅಲ್ಲದೆ, ಆರ್ಥಿಕ ಅಪರಾಧಿಗಳಾಗಿರಲಿ, ಸೈಬರ್ ಅಪರಾಧಿಗಳಾಗಿರಲಿ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿ ಅಥವಾ ಸಂಘಟಿತ ಅಪರಾಧ ಜಾಲಗಳ ಭಾಗವಾಗಿರಲಿ, ಪ್ರತಿಯೊಬ್ಬ ಪರಾರಿಯಾದ ವ್ಯಕ್ತಿಯ ವಿರುದ್ಧ ನಿರ್ದಯವಾದ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಈ ಅಪರಾಧಿಗಳನ್ನು ಭಾರತೀಯ ನ್ಯಾಯ ವ್ಯವಸ್ಥೆಯ ಮುಂದೆ ತರಬೇಕು. ಇದಕ್ಕಾಗಿ ಸಮಯ ಬಂದಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಯಾವುದೇ ಅಪರಾಧಿ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳದಂತೆ ನರೇಂದ್ರ ಮೋದಿ ಸರ್ಕಾರವು ಪರಿಪೂರ್ಣ ಕ್ರಮಗಳನ್ನು ಕೈಗೊಂಡಿದೆ. ಬಲಿಷ್ಠ ಭಾರತವು ತನ್ನ ಗಡಿಗಳ ಭದ್ರತೆಯನ್ನು ಮಾತ್ರವಲ್ಲದೆ ಕಾನೂನಿನ ನಿಯಮವನ್ನು ಬಲಪಡಿಸುವತ್ತ ಮುನ್ನಡೆಯುತ್ತಿದೆ ಎಂದು ಷಾ ಪ್ರತಿಪಾದಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net