

ಬರ್ನ್: ಫೈವ್ ಸ್ಟಾರ್, ಥ್ರೀ ಸ್ಟಾರ್ ಹೀಗೆ ಎಂತೆಂತದ್ದೋ ಅದ್ಭುತ ಹೋಟೆಲ್ಗಳನ್ನು ನೋಡಿರುತ್ತೀರ. ಆದರೆ ಈ ಒಂದು ಹೋಟೆಲ್ ಮಾತ್ರ ನಿಮ್ಮೆಲ್ಲರ ಕಲ್ಪನೆಯನ್ನೇ ತಲೆ ಕೆಳಗೆ ಮಾಡುವಂತಹ ಹೋಟೆಲ್. ಈ ಹೋಟೆಲ್ನಲ್ಲಿ ಗೋಡೆಯಿಲ್ಲ, ಛಾವಣಿಯೂ ಇಲ್ಲ, ಕೊನೆ ಪಕ್ಷ ಒಂದು ಟಾಯ್ಲೆಟ್ ಕೂಡ ಇಲ್ಲ. ಆದರೂ ಈ ಹೋಟೆಲ್ ಎಲ್ಲರ ಹಾಟ್ ಫೇವರಿಟ್ ಅಂತೆ.
ಇಂತದ್ದೊಂದು ಹೋಟೆಲ್ ಇರುವುದು ಸ್ವಿಜರ್ಲೆಂಡ್ನ ಸ್ವಿಸ್ ಆಲ್ಪ್ಸ್ ಪರ್ವತಗಳಲ್ಲಿ. ಜೀರೋ ಸ್ಟಾರ್ ಹೆಸರಿನ ಈ ಹೋಟೆಲ್ನಲ್ಲಿ ಇರುವುದು ಒಂದೇ ಒಂದು ಬೆಡ್ ಮತ್ತು ಅದರ ಅಕ್ಕ ಪಕ್ಕ ಎರಡು ಬೆಡ್ ಲ್ಯಾಂಪ್ಗಳು ಮಾತ್ರ. ಏನೂ ಸೌಲಭ್ಯವಿಲ್ಲದ ಈ ಹೋಟೆಲ್ ಸುತ್ತಮುತ್ತ ಪರ್ವತಗಳಿಂದ ಆವರಿಸಿದೆ. ಎತ್ತ ಕಣ್ಣು ಹಾಯಿಸಿದರೂ ಬರೀ ಹಸಿರೇ ಕಾಣುವಂತಹ ಹೋಟೆಲ್ ಅದು. ಮಲಗಿ ಮೇಲೆ ನೋಡಿದರೆ ನೀಲಿ ಆಗಸ, ಸುತ್ತ ನೋಡಿದರೆ ಹಸಿರ ಪರ್ವತ! ಇದೇ ಆ ಹೋಟೆಲ್ನ ವಿಶೇಷತೆ.
ಅಂದ ಹಾಗೆ ಈ ಹೋಟೆಲ್ನಲ್ಲಿ ತಂಗುವವರಿಗೆ ದಿನವೊಂದಕ್ಕೆ 17 ಸಾವಿರ ರೂಪಾಯಿ ಶುಲ್ಕ ಹಾಕಲಾಗುತ್ತದೆ. ಹತ್ತಿರದಲ್ಲೇ ಸಣ್ಣದೊಂದು ಮನೆಯ ರೀತಿಯಲ್ಲಿ ಮಾಡಿಕೊಂಡಿದ್ದು, ಅಲ್ಲಿ ಅಡುಗೆ ಮಾಡಿ, ಹೋಟೆಲ್ಗೆ ಬರುವ ಪ್ರವಾಸಿಗರಿಗೆ ಕೊಡಲಾಗುತ್ತದೆ. ಅವರು ಒಂದು ವೇಳೆ ಟಾಯ್ಲೆಟ್ ಬಳಸಬೇಕೆಂದರೆ ಸುಮಾರು ಐದು ನಿಮಿಷ ನಡೆದರೆ ಸಿಗುವ ಸಾರ್ವಜನಿಕ ಟಾಯ್ಲೆಟ್ ಅನ್ನೇ ಬಳಸಬೇಕು.
ಅಂದ ಹಾಗೆ ಈ ಹೋಟೆಲ್ಗ ಮುಂಗಡವಾಗಿ ಬುಕ್ಕಿಂಗ್ ಮಾಡಿಟ್ಟುಕೊಳ್ಳಬೇಕು. ಹಾಗಿದ್ದರೂ ಕೆಲವೊಮ್ಮೆ ಹವಾಮಾನ ಕೈ ಕೊಟ್ಟರೆ ಬುಕ್ಕಿಂಗ್ ಕ್ಯಾನ್ಸಲ್ ಆಗುವ ಸಾಧ್ಯತೆ ಇರುತ್ತದೆ. ಈ ವರ್ಷ ಕರೊನಾದ ಕಾಟದಿಂದಾಗಿ ಬುಕ್ಕಿಂಗ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಮುಂದಿನ ವರ್ಷವೇ ಮತ್ತೆ ಬುಕ್ಕಿಂಗ್ ತೆರೆಯುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)