ಈ ವಿಷಯವನ್ನು ರಾಜಕೀಯಗೊಳಿಸಬೇಡಿ! ನನ್ನ ಕುಟುಂಬಕ್ಕೆ ನ್ಯಾಯ ಬೇಕಿದೆ: ಜೀಶನ್ ಸಿದ್ದಿಕ್ ಭಾವುಕ | Zeeshan Siddique

Zeeshan Siddique
Published on

ಮುಂಬೈ: ಅ.12ರ ತಡರಾತ್ರಿ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಅಜಿತ್​ ಪವಾರ್​ ನೇತೃತ್ವದ ಎನ್​ಸಿಪಿ ಬಣದ ನಾಯಕ ( NCP leader ) ಬಾಬಾ ಸಿದ್ದಿಕ್ ( Baba Siddique & son Zeeshan Siddique )​ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಘಟನೆ ಇಡೀ ದೇಶದ ಜನತೆಯನ್ನೇ ಬೆಚ್ಚಿಬೀಳಿಸಿತು. 66 ವರ್ಷದ ಬಾಬಾ ಸಿದ್ದಿಕ್​ ಅವರ ಹೊಟ್ಟೆ ಮತ್ತು ಎದೆಗೆ ಗುಂಡು ಹಾರಿಸಿದ ಬಿಷ್ಣೋಯಿ ಗ್ಯಾಂಗ್, ಸಿದ್ಧಿಕ್​ರನ್ನು ಬರ್ಬರವಾಗಿ ಹತ್ಯೆ ಮಾಡಿತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಬಾ ಸಿದ್ದಿಕ್​ ಕೊನೆಯುಸಿರೆಳೆದರು. ಈ ಪ್ರಕರಣ ಸಂಬಂಧ ಕರ್ನೈಲ್​ ಸಿಂಗ್​, ಧರ್ಮರಾಜ್​ ಕಶ್ಯಪ್ ಸೇರಿದಂತೆ ಒಟ್ಟು ನಾಲ್ವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಇನ್ನು ಈ ಮಧ್ಯೆ ಕಳೆದ ವಾರ ತನ್ನ ತಂದೆ, ಮಾಜಿ ಸಚಿವ ಬಾಬಾ ಸಿದ್ದಿಕ್​ರನ್ನು ಗುಂಡಿಕ್ಕಿ ಕೊಂದ ಬೆನ್ನಲ್ಲೇ ಮೊದಲ ಪ್ರತಿಕ್ರಿಯೆ ನೀಡಿರುವ ಬಾಂದ್ರಾ ಪೂರ್ವ ಶಾಸಕ ಜೀಶನ್ ಸಿದ್ದಿಕ್, "ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಬೇಕಿದೆ. ದಯವಿಟ್ಟು ಈ ವಿಷಯವನ್ನು ರಾಜಕೀಯಗೊಳಿಸಬೇಡಿ, ಇಲ್ಲಿ ನಮ್ಮ ಕುಟುಂಬಸ್ಥರು ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾರೆ" ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಸಿದ್ದಿಕ್​ ಹತ್ಯೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ನಾಲ್ಕನೇ ಆರೋಪಿಯನ್ನು ಬಂಧಿಸುವಲ್ಲಿ  ಇದೀಗ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು 23 ವರ್ಷದ ಹರೀಶ್‌ಕುಮಾರ್ ಬಲಕ್ರಂ ಎಂದು ಗುರುತಿಸಲಾಗಿದ್ದು, ಈತ ಕೊಲೆಗೆ ಹಣ ಸರಬರಾಜು ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಿದ್ದ ಎನ್ನಲಾಗಿದೆ. ಹರೀಶ್​ ಸುಳಿವನ್ನು ಪತ್ತೆಹಚ್ಚಿದ ಪೊಲೀಸರು, ಆತನನ್ನು ಉತ್ತರಪ್ರದೇಶದ ಬಹ್ರೈಚ್‌ನಲ್ಲಿ ಸೆರೆಹಿಡಿದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net