

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಆಟದ ಮೈದಾನದಲ್ಲಿ ಮೊದಲ ಬಾರಿಗೆ 74ನೇ ಗಣರಾಜ್ಯೋತ್ಸವ ಆಚರಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿನ್ನೆಯಿಂದಲೇ ಮೈದಾನದ ಸುತ್ತಮುತ್ತ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದೀಗ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿ, ನಾನು ಮುಖ್ಯಮಂತ್ರಿಗಳಿಗೆ, ಕಂದಾಯ ಇಲಾಖೆಗೆ ಗಣರಾಜೋತ್ಸವ ಆಚರಣೆ ಮಾಡಬೇಕು ಎಂದು ಪತ್ರ ಬರೆದಿದ್ದೆ. 74ನೇ ಗಣರಾಜ್ಯೋತ್ಸವ ಸಂಭ್ರಮದ ವೇಳೆ ಆಚರಣೆಗೆ ಸರ್ಕಾರ ಅನುಮತಿ ಕೊಟ್ಟಿರುವುದು ಸಂತಸ ತಂದಿದೆ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದರು.
ಹಿಂದುಗಳ ಹಬ್ಬಕ್ಕೂ ಪತ್ರ ಬರೆಯುತ್ತೀರಾ ಎಂಬ ಪ್ರಶ್ನೆ ಎದುರಾದಾಗ ಜಮೀರ್ ಅಹ್ಮದ್ ಖಾನ್ ಗರಂ ಆದಂತಹ ಪ್ರಸಂಗವೂ ನಡೆಯಿತು. ಮೈದಾನ ನನ್ನ ಸೊತ್ತಲ್ಲ. ಇದರ ಬಗ್ಗೆ ಕಂದಾಯ ಮಂತ್ರಿ ಆರ್. ಅಶೋಕ್ ಅವರನ್ನು ಕೇಳಬೇಕು. ಗಣರಾಜ್ಯೋತ್ಸವ ಆಚರಣೆಗೆ ಅವಕಾಶ ಕೋರಿ ನಾನು ಜನವರಿ 3ರಂದೇ ಸರ್ಕಾರಕ್ಕೆ ಪತ್ರ ಬರೆದ್ದಿದೇನೆ. ಹೀಗಾಗಿ ಅನುಮತಿ ಕೊಟ್ಟಿದ್ದಾರೆ ಎಂದು ಹೇಳಿದರು.