ಮೈಸೂರು: ವಿದ್ಯಾರ್ಥಿನಿಯರು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಓದಿ ಉನ್ನತ ಸಾಧನೆ ತೋರುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಶಾಸಕ ಕೆ. ಹರೀಶ್ ಗೌಡ ಕರೆ ನೀಡಿದರು.
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮಹಾರಾಣಿ ಕಲಾ ಕಾಲೇಜು, ಕಾಲೇಜಿನ ಎನ್‌ಎಸ್‌ಎಸ್ ಘಟಕ, ಮೈಸೂರು ವಿಶ್ವ ವಿದ್ಯಾಲಯದ ಎನ್‌ಎಸ್‌ಎಸ್ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಮಹಾರಾಣಿ ಕಲಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾರಾಣಿ ಕಾಲೇಜಿನಲ್ಲಿ ಬಡ ವರ್ಗದ ಹೆಣ್ಣು ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ನಿಮ್ಮ ಭವಿಷ್ಯ ಉಜ್ವಲ ಆಗಲು ಕಲಿಕೆಯ ಕಡೆಗೆ ಗಮನ ಹರಿಸಿ. ನಿಮ್ಮನ್ನು ಓದಿಸಲು ಪಾಲಕರು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ನೀವು ಈ ಹಂತದಲ್ಲಿ ಎಡವಿದರೆ ಸಮಾಜ ಬೇರೆ ರೀತಿ ನಿಮ್ಮನ್ನು ಕಾಣುತ್ತದೆ. ಹಾಗಾಗಿ ಉತ್ತಮವಾಗಿ ಓದಿ ಸಾವಿರಾರು ಜನರಿಗೆ ದಾರಿ ದೀಪವಾಗಬೇಕು. ಸಾಧಿಸಬೇಕು ಎಂಬ ಛಲ ನಿಮ್ಮಲ್ಲಿ ಮೂಡಬೇಕು ಎಂದು ಕರೆ ನೀಡಿದರು.
ಮಹಾರಾಜ ಹಾಗೂ ಮಹಾರಾಣಿ ಕಾಲೇಜು ತನ್ನದೇ ಆದ ಇತಿಹಾಸ ಹಾಗೂ ಗೌರವ ಹೊಂದಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಆದರೆ, ಕಾಲೇಜಿನ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವುದು ಬೇಸರದ ಸಂಗತಿ. ಕಾಲೇಜಿನ ಕಟ್ಟಡದ ದುರಸ್ತಿ ಹಾಗೂ ಕಾಲೇಜಿಗೆ ಮೂಲಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ನೆಹರು ಯುವ ಕೇಂದ್ರದ ದಕ್ಷಿಣ ರಾಜ್ಯಗಳ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್ ಮಾತನಾಡಿ, ನೂತನ ಯುವನೀತಿಯ ಪ್ರಕಾರ 15 ರಿಂದ 29 ವರ್ಷದವರನ್ನು ಯುವಜನರು ಎಂದು ಗುರುತಿಸಲಾಗುವುದು. ಈ ಪ್ರಕಾರ ದೇಶದಲ್ಲಿ 45 ಕೋಟಿಯಷ್ಟು ಯುವಜನರು ಇದ್ದಾರೆ. ವಿಶ್ವದಲ್ಲಿಯೇ ಅತಿಹೆಚ್ಚು ಯುವಜನರು ಹೊಂದಿರುವ ರಾಷ್ಟ್ರ ನಮ್ಮದು. ಈ ಕಾರಣಕ್ಕೆ ವಿಶ್ವ ನಮ್ಮ ಯುವ ಶಕ್ತಿಯ ಕಡೆ ನೋಡುತ್ತಿದೆ ಎಂದರು.
ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲ ಡಾ.ಬಿ.ವಿ. ವಸಂತ ಕುಮಾರ್, ಕಾಲೇಜಿನ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಜಯರಾಜ್, ಖಜಾಂಚಿ ಸವಿತಾ, ಮೈಸೂರು ವಿಶ್ವ ವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಎಂ.ಬಿ. ಸುರೇಶ್, ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಎಂ. ವಿಶ್ವನಾಥನ್ ಹಾಗೂ ಇತರರು ಇದ್ದರು.