

ಬೆಂಗಳೂರು: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ವರ್ಣಭೇದದ ಹೇಳಿಕೆ ಖಂಡಿಸಿ, ದೇಶದ ಜನರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಗುರುವಾರ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಸ್ವಾತಂತ್ರ್ಯದ ಉದ್ಯಾನವನದಲ್ಲಿ ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜಮಾಯಿಸಿದರು. ಪಿತ್ರೋಡಾ ವಿರುದ್ಧ ಧಿಕ್ಕಾರ ಮೊಳಗಿಸಿ, ಘೋಷಣಾ ಫಲಕ ಪ್ರದರ್ಶಿಸಿದರು.
ಭಾರತೀಯರನ್ನು ಚರ್ಮದ ಬಣ್ಣದ ಆಧಾರದಲ್ಲಿ ವಿಂಗಡಿಸಿ ಜನಾಂಗೀಯ ನಿಂದನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ವಿಭಜನಕಾರಿ ನೀತಿ, ದ್ವೇಷ ಕೆರಳಿಸುವ ಗುಣವಿದು. ಸ್ಯಾಮ್ ಪಿತ್ರೋಡಾ ಅವರ ಮೂಲಕ ಕಾಂಗ್ರೆಸ್ ಪಕ್ಷವು ದೇಶದ ಜನರಲ್ಲಿ ಬಿರುಕು ತರುವ, ದೇಶ ಒಡೆಯುವ ಕೆಲಸ ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯ ಬಳಿಕ ಸ್ಯಾಮ್ ಪಿತ್ರೋಡಾ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಕಾನೂನು ಕ್ರಮಕ್ಕೂ ಒತ್ತಾಯಿಸಿದರು. ಯುವ ಮೋರ್ಚಾ ರಾಜ್ಯಾಧ್ಯಕ್ಷ, ಶಾಸಕ ಧೀರಜ್ ಮುನಿರಾಜು, ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಪದಾಧಿಕಾರಿಗಳು, ಪಕ್ಷದ ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿಗೌಡ, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.