

ಪಶ್ಚಿಮ ಬಂಗಾಳ: ಲೋಕಸಭಾ ಚುನಾವಣೆ 2024ಕ್ಕೆ ಚುನಾವಣಾ ಅಖಾಡ ಭರದಿಂದ ಸಿದ್ಧಗೊಳ್ಳುತ್ತಿದ್ದು, ಇತರೆ ಪಕ್ಷಗಳು ಭರ್ಜರಿ ಪೈಪೋಟಿಗೆ ಸಕಲ ತಯಾರಿ ನಡೆಸುತ್ತಿದೆ. ಈ ಮಧ್ಯೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಕೃತಜ್ಞತೆ ಸಲ್ಲಿಸಿದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, "ಸಂಸತ್ತಿನಲ್ಲಿ ಜನರ ಧ್ವನಿಯಾಗಲು ನನ್ನ ಮೇಲಿಟ್ಟ ನಂಬಿಕೆಗಾಗಿ ಧನ್ಯವಾದ" ಎಂದು ತಿಳಿಸಿದ್ದಾರೆ.
ಇಂದು ತೃಣಮೂಲ ಕಾಂಗ್ರೆಸ್ ಯೂಸುಫ್ ಪಠಾಣ್ ಅವರನ್ನು ಬಹರಂಪುರದಿಂದ ಲೋಕಸಭಾ ಅಭ್ಯರ್ಥಿಯಾಗಿ ಹೆಸರಿಸಿತು. ಈ ಬೆನ್ನಲ್ಲೇ ತನ್ನ ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ಬರೆದುಕೊಂಡ ಪಠಾಣ್, "ನನ್ನನ್ನು ಟಿಎಂಸಿ ಕುಟುಂಬಕ್ಕೆ ಸ್ವಾಗತಿಸಿದ ಮತ್ತು ಸಂಸತ್ತಿನಲ್ಲಿ ಜನರ ಧ್ವನಿಯಾಗುವ ಜವಾಬ್ದಾರಿಯೊಂದಿಗೆ ನನ್ನನ್ನು ನಂಬಿದ್ದಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿಗೆ ನಾನು ಚಿರಋಣಿಯಾಗಿದ್ದೇನೆ" ಎಂದರು.
"ಜನರ ಪ್ರತಿನಿಧಿಗಳಾಗಿ, ಬಡವರು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತರಾದವರನ್ನು ಮೇಲಕ್ಕೆತ್ತುವುದು ನಮ್ಮ ಕರ್ತವ್ಯ ಮತ್ತು ಅದನ್ನೇ ನಾನು ಸಾಧಿಸಲು ಆಶಿಸುತ್ತೇನೆ" ಎಂದರು. ತಮ್ಮ ಸಹೋದರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ತಿಳಿಸಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, "ನಿಮ್ಮ ತಾಳ್ಮೆ, ದಯೆ, ಅಗತ್ಯವಿರುವವರಿಗೆ ಸಹಾಯ ಮಾಡಿ ಮತ್ತು ದೊಡ್ಡ ಸ್ಥಾನವಿಲ್ಲದಿದ್ದರೂ ಜನರ ಸೇವೆಯನ್ನು ಸುಲಭವಾಗಿ ಗಮನಿಸಬಹುದು. ಒಮ್ಮೆ ನೀವು ರಾಜಕೀಯಕ್ಕೆ ಕಾಲಿಟ್ಟರೆ, ನೀವು ನಿಜವಾಗಿಯೂ ಜನರ ದೈನಂದಿನ ಜೀವನದಲ್ಲಿ ಒಂದು ಮಹತ್ವದ ಬದಲಾವಣೆಯನ್ನು ತರುತ್ತೀರಿ ಎಂದು ನನಗೆ ವಿಶ್ವಾಸವಿದೆ" ಎಂದಿದ್ದಾರೆ.
ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಟಿಎಂಸಿ ಲೋಕಸಭೆ ಚುನಾವಣೆಗೆ 42 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಮೈದಾನದಲ್ಲಿ ಅಭ್ಯರ್ಥಿಗಳೊಂದಿಗೆ ಪರೇಡ್ ನಡೆಸುತ್ತಿದ್ದಂತೆ ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದರು,(ಏಜೆನ್ಸೀಸ್).