ಪೋರ್ಶೆ ಕಾರು ಅಪಘಾತದ ಬಳಿಕ ಬೆಳಕಿಗೆ ಬಂತು ಮತ್ತೊಂದು ಹೈಪ್ರೊಫೈಲ್​ ಪ್ರಕರಣ; ಈ ಬಾರಿ ಕೃತ್ಯ ಎಸಗಿದ್ದು ಯಾರು ನೋಡಿ

Beeda Madhuri
Published on

ಚೆನ್ನೈ: ಕೆಲ ದಿನಗಳ ಹಿಂದಷ್ಟೇ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಪುಣೆ ಪೋರ್ಶೆ ಕಾರು ಅಪಘಾತ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಹೈ ಪ್ರೊಫೈಲ್‌ ವ್ಯಕ್ತಿ ಭಾಗಿಯಾಗಿರುವ ಮತ್ತೊಂದು ಹಿಟ್‌ ಆಂಡ್‌ ರನ್‌ ಕೇಸ್​ ಬೆಳಕಿಗೆ ಬಂದಿದೆ.

ತಮಿಳುನಾಡಿದ ರಾಜಧಾನಿ ಚೆನ್ನೈನಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಸೂರ್ಯ (21) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶ ಮಾಜಿ ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಸಂಸದ (ರಾಜ್ಯಸಭೆ) ಬೀಡಾ ಮಸ್ತಾನ್​ ರಾವ್​ ಅವರ ಪುತ್ರಿ ಮಾಧುರಿ ಫುಟ್​ಪಾತ್​ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಕಾರು ಹರಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ನ್ಯಾಯಾಲಯ ಆಕೆಗೆ ಜಾಮೀನು ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬೆಸೆಂಟ್ ನಗರದ ಊರೂರು ಕುಪ್ಪಂ ನಿವಾಸಿ ಸೂರ್ಯ ಸೋಮವಾರ ರಾತ್ರಿ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಬಳಿಕ ಸಿಟ್ಟಿನಲ್ಲಿ ಮನೆ ಬಿಟ್ಟು ಬಂದಿದ್ದು, ಬಾರ್​ ಒಂದರಲ್ಲಿ ಕುಡಿದು ಟೈಗರ್ ವರದಾಚಾರಿ ಸಲೈ ಬಳಿ ಇರುವ ಪಾದಾಚಾರಿ ಮಾರ್ಗದ ಮೇಲೆ ಮಲಗಿದ್ದಾನೆ.

ತುಂಬಾ ಹೊತ್ತಾದರು ಪತಿ ಮನೆಗೆ ಬಾರದೇ ಇರುವುದನ್ನು ನೋಡಿ ಸೂರ್ಯನ ಪತ್ನಿ ವನಿತಾ ಆತನಿಗಾಗಿ ಹುಡುಕಾಟ ನಡೆಸಿದ್ದು, ಆತನನ್ನು ಟೈಗರ್ ವರದಾಚಾರಿ ಸಲೈ ಬಳಿ ಇರುವ ಪಾದಾಚಾರಿ ಮಾರ್ಗದ ಮೇಲೆ ಮಲಗಿರುವುದನ್ನು ಕಂಡು ಸಂಬಂಧಿಕರಿಗೆ ಕರೆ ಮಾಡಿದ್ದಾಳೆ ಈ ವೇಳೆ ವೇಗವಾಗಿ BMW ಕಾರಿನಲ್ಲಿ ವೇಗವಾಗಿ ಬಂದ ವೈಎಸ್​ಆರ್​ ಕಾಂಗ್ರೆಸ್​ ಸಂಸದನ ಪುತ್ರಿ ಮಾಧುರಿ ರಸ್ತೆಬದಿ ಮಲಗಿದ್ದ ಸೂರ್ಯನ ಮೇಲೆ ಕಾರು ಹರಿಸಿದ್ದಾಳೆ.

ಇದನ್ನು ಗಮನಿಸಿದ ಮಾಧುರಿ ಹಾಗೂ ಆಕೆಯ ಸ್ನೇಹಿತೆ ಕೂಡಲೇ ಅಂಬುಲೆನ್ಸ್​ಗೆ ಕರೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸೂರ್ಯನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೂರ್ಯ ಅಸುನೀಗಿದ್ದಾನೆ. ಇದಾದ ಬಳಿಕ ಮಾಧುರಿ ಹಾಗೂ ಆಕೆಯ ಸ್ನೇಹಿತೆ ಸ್ಥಳದಿಂದ ತೆರಳಿದ್ದಾರೆ. ಬಳಿಕ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಮಾಧುರಿ ಆಕೆಯ ಸ್ನೇಹಿತೆ ಹಾಗೂ ಕಾರನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್​ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net