ತನ್ನ ಇಬ್ಬರೂ ಪತ್ನಿಯರು ಒಂದೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂದ ಯೂಟ್ಯೂಬರ್‌ಗೆ ನಿಜಕ್ಕೂ ಇರೋದು ಎಷ್ಟು ಹೆಂಡತಿಯರು?

Armaan Mallik
Published on

ಹೈದರಾಬಾದ್: ಯೂಟ್ಯೂಬರ್ ಅರ್ಮಾನ್ ಮಲಿಕ್ ಎಂಬಾತ, ಪಾಯಲ್  ಮತ್ತು ಕೃತಿಕಾ ಎಂಬ ಇಬ್ಬರು ಮಹಿಳೆಯರನ್ನು ವಿವಾಹವಾಗಿದ್ದ. ಇದೀಗ ಇವರಿಬ್ಬರು ಒಟ್ಟೊಟ್ಟಿಗೆ ಗರ್ಭಿಣಿಯಾಗಿದ್ದಾರೆ ಎಂದು ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ಸಂತಸವನ್ನು ಹಂಚಿಕೊಂಡಿದ್ದಾನೆ. ಫೋಟೋ ಪೋಸ್ಟ್​ ಮಾಡಿ ‘ಇದು ನನ್ನ ಕುಟುಂಬ’ ಎಂಬ ಬರೆದುಕೊಂಡಿರುವುದು ವೈರಲ್ ಆಗಿದೆ.

ಇದರ ಬೆನ್ನಲ್ಲೇ ಅರ್ಮಾನ್ ಮಲಿಕ್‌ನ ಬಗ್ಗೆ ಹಲವಾರು ವಿಷಯಗಳು ಹೊರಗೆ ಬರತೊಡಗಿವೆ. ಆತ ಎರಡಲ್ಲ, ಮೂರು ಮದುವೆಯಾಗಿದ್ದಾನೆ ಎಂಬ ಸಂಗತಿಯೂ ಅದರಲ್ಲೊಂದು. ಪಾಯಲ್ ಜತೆ ಸೇರುವುದಕ್ಕಿಂತ ಮೊದಕೇ ಈತ ಮದುವೆಯಾಗಿದ್ದ. ಮನೆಯವರು ತೋರಿಸಿದ ಹುಡುಗಿಯನ್ನು ಅರ್ಮಾನ್ ಮಲಿಕ್ ವಿವಾಹವಾಗಿದ್ದ. ಆಕೆಯೊಂದಿಗೆ ಕೆಲ ಸಮಯ ಸಂಸಾರ ನಡೆಸಿದ್ದ. ಈ ದಂಪತಿಗೆ ಎರಡು ಮಕ್ಕಳಿದ್ದರು ಎಂದು ವರದಿಯೊಂದು ಉಲ್ಲೇಖಿಸಿದೆ.  

ಸದ್ಯ ಅರ್ಮಾನ್ ಮಲಿಕ್, ಪಾಯಲ್ ಎಂಬಾಕೆಯ ಜತೆಗೆ ಎರಡನೇ ವಿವಾಹವಾಗಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಪಾಯಲ್ ಜತೆಗೆ ಅರ್ಮಾನ್ ಮದುವೆಯಾಗಿಲ್ಲ, ಇವರಿಬ್ಬರು 2011ರಿಂದ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದಾರೆ. ಇವರಿಬ್ಬರಿಗೆ ಒಬ್ಬ ಮಗನಿದ್ದಾನೆ. ಈತ ಮೂರನೇ ಪತ್ನಿ ಕೃತಿಕಾ ಜತೆಗೆ ಮಾತ್ರ ಕಾನೂನುಬದ್ಧವಾಗಿ ಮದುವೆಯಾಗಿದ್ದಾನೆ ಎನ್ನಲಾಗಿದೆ. 

ಅರ್ಮಾನ್ ಮಲಿಕ್ ಎಂಬ ಹೆಸರು ನೋಡಿ ಎಲ್ಲರೂ ಈತ ಇಸ್ಲಾಂ ಧರ್ಮಕ್ಕೆ ಸೇರಿದವನು ಎಂದು ತಿಳಿದುಕೊಂಡಿದ್ದರು. ಆದರೆ ಅರ್ಮಾನ್ ಮಲಿಕ್​ನ ನಿಜ ಹೆಸರು ಸಂದೀಪ್. ಹಿಂದೂ ಧರ್ಮದಲ್ಲಿ ಬಹುಪತ್ನಿತ್ವ ಹೊಂದಲು ಅವಕಾಶವಿಲ್ಲ. ಆದರೆ ಇಸ್ಲಾಂ ಧರ್ಮದಲ್ಲಿ ಕಾನೂನುಬದ್ಧವಾಗಿ ನಾಲ್ಕು ಮದುವೆ (ಶರಿಯಾ ಪ್ರಕಾರ) ಆಗಬಹುದು. ಹೀಗಾಗಿ ಸಂದೀಪ್ ತನ್ನ ಹೆಸರನ್ನು ಅರ್ಮಾನ್ ಎಂದು ಬದಲಾಯಿಸಿಕೊಂಡಿದ್ದಾನೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

ಅರ್ಮಾನ್ ಮಲಿಕ್ ವಿಡಿಯೋವೊಂದರಲ್ಲಿ ನಾನು ಹಿಂದೂ ಧರ್ಮದಲ್ಲೇ ಇದ್ದೇನೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗಿಲ್ಲ ಎಂದು ಹೇಳಿಕೊಂಡಿದ್ದಾನೆ ಎಂದಿದ್ದಾರೆ ಕೆಲವು ನೆಟ್ಟಿಗರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net