ತರಬೇತಿಗೆ ಯುವಜನರು ಹಿಂದೇಟು: ಸಚಿವ ಶರಣಪ್ರಕಾಶ್ ಪಾಟೀಲ | Skill development

SPP press meet
Published on

ಬೆಂಗಳೂರು: ‘ಯುವನಿಧಿ’ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡ ಪದವೀಧರರು, ಡಿಪ್ಲೊಮಾ ತೇರ್ಗಡೆಯಾದವರು ತರಬೇತಿಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಅಚ್ಚರಿ ಮಾಹಿತಿಯನ್ನು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಬಹಿರಂಗಪಡಿಸಿದರು.

ಬೆಂಗಳೂರಿನ ನ.4 ರಿಂದ 6ರವರೆಗೆ ನಡೆಯಲಿರುವ ಕೌಶಲ್ಯಶೃಂಗ ಸಭೆ-2025’ರ ಕೈಪಿಡಿಯನ್ನು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವನಿಧಿ ಪ್ರಗತಿ ವಿವರಿಸಿದರು.

ಯುವನಿಧಿಯಡಿ ನೋಂದಣಿ ಪ್ರಕಾರ ಮೂರು ಲಕ್ಷ ಡಿಪ್ಲೊಮಾ, ಪದವೀಧರರಿದ್ದಾರೆ. ನಿರುದ್ಯೋಗ ಭತ್ಯೆ ಪಡೆದವರು, ತರಬೇತಿ ಪಡೆಯಲು ಹಿಂಜರಿಯತ್ತಿದ್ದಾರೆ. ತರಬೇತಿಗೆ ಹಾಜರಾದರೆ ಮಾಸಿಕ ಕೈತಪ್ಪುವ ಭೀತಿಯೇ ಕಾರಣವೆಂದರು.

ತರಬೇತಿಗೆ ಹಾಜರಾದರೂ ಮಾಸಿಕ ನಿರುದ್ಯೋಗ ಭತ್ಯೆ ಪಾವತಿಯಾಗುತ್ತದೆ. ನಿರುದ್ಯೋಗಿ ಯುವ ಜನರಿಗೆ ಈ ಬಗ್ಗೆ ತಪ್ಪು ತಿಳಿವಳಿಕೆ ಬೇಡವೆಂದು ಸ್ಪಷ್ಟಪಡಿಸಿದ ಸಚಿವ ಶರಣಪ್ರಕಾಶ್ ಪಾಟೀಲ, ತರಬೇತಿ ಕಡ್ಡಾಯಗೊಳಿಸಿದರೆ ಬೇರೆ ವ್ಯಾಖ್ಯಾನ, ತಪ್ಪು ಸಂದೇಶ ರವಾನಿಸಲಿದೆ ಎಂದರು.

ಸಮಸ್ಯೆ ಪರಿಹಾರಕ್ಕೆ ಒತ್ತು

ಯುವನಿಧಿ ಉದ್ದೇಶ ಅರ್ಹರಿಗೆ ಮಾಸಿಕ ನಿರುದ್ಯೋಗ ಭತ್ಯೆ ಪಾವತಿಗೆ ಸೀಮಿತವಾಗಿಲ್ಲ. ಡಿಪ್ಲೊಮಾ ಅಥವಾ ಪದವೀಧರರು ಮನಸ್ಥಿತಿ, ಪರಿಸ್ಥಿತಿ, ವಸ್ತುಸ್ಥಿತಿ, ಪರಿಹಾರೋಪಾಯಗಳು, ತರಬೇತಿ ನೀಡಿ ಉದ್ಯೋಗಿಗಳನ್ನಾಗಿ ಪರಿವರ್ತಿಸುವಂತಹ ವ್ಯಾಪಕ ದೃಷ್ಟಿಕೋನ ಹೊಂದಿದೆ ಎಂದು ವಿವರಿಸಿದರು.

ನಿರುದ್ಯೋಗ ಸಮಸ್ಯೆಯತ್ತ ಕೇಂದ್ರ ಸರ್ಕಾರ ಬೆನ್ನು ತೋರಿಸಿದ್ದರೆ, ರಾಜ್ಯ ಸರ್ಕಾರ ಮೈಮೇಲೆ ಎಳೆದುಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಡಿಪ್ಲೊಮಾ, ಪದವೀಧರರ ಪೈಕಿ ಎಷ್ಟು ಜನ ಮುಂದಿನ ವ್ಯಾಸಂಗಕ್ಕೆ ಹೋದವರು ಎಷ್ಟು ಗೊತ್ತಾಗಲಿದೆ.

ಸ್ವಾವಲಂಬಿ ಜೀವನ ಕಂಡುಕೊಂಡವರು, ಯುವಜನರಿಂದ ಅವಕಾಶಗಳ ಶೋಧ, ಬಳಕೆ ಇತ್ಯಾದಿ ಪ್ರಯತ್ನ ತಿಳಿಯಲಿದೆ. ಹಾಗೆಯೇ ಅವರವರ ಪ್ರತಿಭೆ ಹಾಗೂ ಆಸಕ್ತಿಗೆ ತಕ್ಕಂತೆ ನೈಪುಣ್ಯ ತರಬೇತಿ, ಅವಕಾಶ ಸೃಷ್ಟಿಗೆ ವೇದಿಕೆ ಕಲ್ಪಿಸುವುದು ‘ಯುವನಿಧಿ’ ತಿರುಳು ಎಂದು ಶರಣಪ್ರಕಾಶ್ ಪಾಟೀಲ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್‌ನಲ್ಲಿ ಕೌಶಲ್ಯಾಭಿವೃದ್ಧಿಗೆ ಹೊಸ ಆಯಾಮ, ಕೌಶಲ ಒಲಿಂಪಿಯಾಡ್ ಹಾಗೂ ನೂತನ ಕೌಶಲ ನೀತಿಯನ್ನು ಪ್ರಕಟಿಸಿದ್ದರು. ಅದರಂತೆಯೇ ಹೊಸ ಕೌಶಲ್ಯ ನೀತಿ ಸಿದ್ಧವಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದರು.

ನ.4ರಿಂದ ಕೌಶಲ್ಯ ಶೃಂಗ

‘ಮಾನವ ಸಂಪನ್ಮೂಲ-2030’ ೋಷವಾಕ್ಯದಡಿ ‘ಬೆಂಗಳೂರು ಕೌಶಲ್ಯ ಶೃಂಗಸಭೆ-2025’ ನವೆಂಬರ್ 4ರಿಂದ 6ರವರೆಗೆ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಆಯೋಜಿಸಿದ್ದು, ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ವಿಸ್ತರಣೆ, ವ್ಯವಸ್ಥೆಗಳು ಮತ್ತು ಸಮನ್ವಯ ಈ ಮೂರು ವಿಚಾರಧಾರೆಯ ಮೇಲೆ ಚರ್ಚಾಗೋಷ್ಠಿ, ಯಶೋಗಾಥೆಗಳ ಪ್ರಸ್ತುತಿ, ವಿವಿಧ ಕ್ಷೇತ್ರಗಳ ಪ್ರಮುಖರ ವಿಚಾರ ಮಂಡನೆ, ಹೊಸ ತಲೆಮಾರಿನ ತಂತ್ರಜ್ಞಾನ, ಶಿಕ್ಷಣ ರಂಗದ ಪಠ್ಯಕ್ರಮ ಮರುವಿಮರ್ಶೆ ಅಗತ್ಯತೆ, ಉದ್ಯಮದ ಜತೆಗೆ ವ್ಯಾಸಂಗ ಜೋಡಣೆ ವಿಷಯಗಳು ಚರ್ಚೆಯಾಗಲಿವೆ.

ಮುಂದಿನ ದಿನಗಳಲ್ಲಿ ಪೂರ್ಣ ಬದಲಾವಣೆಗೆ ಪೂರಕವಾದ ಕಾರ್ಯ ಪರಿಸರ ಸೇರಿ ಯುವಜನರು ಉದ್ಯೋಗಿಯಾಗುವ ಜತೆಗೆ ಉದ್ಯೋಗದಾತನ ಆಗುವಂತಹ ಸಾಮರ್ಥ್ಯ ಬೆಳೆಸಿಕೊಳ್ಳಲು ಈ ಸಭೆ ಒತ್ತು ನೀಡಲಿದೆ ಎಂದು ಮಾಹಿತಿ ನೀಡಿದರು.

ಜರ್ಮನ್, ಜಪಾನ್ ಮತ್ತಿತರ ದೇಶಗಳ ಭಾಷೆ ಕಲಿಕೆ, ಅವಕಾಶಗಳ ಬಳಕೆಗೆ ವಿಧಾನದ ಬಗ್ಗೆ ದಿಕ್ಸೂಚಿಯಾಗಲಿದೆ. ಮುಂದಿನ ಜನವರಿಯಲ್ಲಿ ಅಂತಾರಾಷ್ಟ್ರೀಯಮಟ್ಟದ ಉದ್ಯೋಗ ಮೇಳ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net