ಶೋಕಿಗಾಗಿ ಯುವಕರು ಮಾದಕದ್ರವ್ಯ ವ್ಯಸನಕ್ಕೆ ಬಲಿ

26 NMG 02 (2)
ನಾಗಮಂಗಲ ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಹಾಗೂ ಜಾಗೃತಿ ಜಾಥಾಕ್ಕೆ ಡಿವೈಎಸ್ಪಿ ಚಲುವರಾಜು ಹಾಗೂ ವಿವಿ ಉಪಕುಲಪತಿ ಡಾ.ಎಂ.ಎ.ಶೇಖರ್ ಚಾಲನೆ ನೀಡಿದರು. ನಿರಂಜನ್, ರವಿಕುಮಾರ್, ಡಾ.ಎಂ.ಜಿ.ಶಿವರಾಮು, ಡಾ.ಎಂ.ಎ.ಶೇಖರ್, ಸುಬ್ಬರಾಯ್, ಚಂದನ್‌ರಾಜ್ ಇದ್ದರು.
Published on

ನಾಗಮಂಗಲ: ಇಂದಿನ ಯುವಪೀಳಿಗೆ ಕೆಲವು ಕಾನೂನು ಬಾಹಿರ ಚಟುವಟಿಕೆ ಎಂಬ ಅರಿವಿದ್ದರೂ ಶೋಕಿಗಾಗಿ ಹಾಗೂ ಕೆಲವರ ಸಹವಾಸದಿಂದ ತಮ್ಮ ಮುಂದಿನ ಭವಿಷ್ಯ ಹಾಗೂ ತಮ್ಮ ಕುಟುಂಬವನ್ನು ಮರೆತು ಮಾದಕ ವ್ಯಸನಿಗಳಾಗಿ ಜೀವನದ ಅಂತ್ಯ ಕಾಣುತ್ತಿದ್ದಾರೆ ಎಂದು ಡಿವೈಎಸ್ಪಿ ಚಲುವರಾಜು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ವಿವಿ ಆವರಣದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಹಾಗೂ ಜಾಗೃತಿ ಜಾಥಾಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಇತ್ತೀಚೆಗೆ ಮಾದಕ ಸೇವನೆ, ದೌರ್ಜನ್ಯ ಹಾಗೂ ಸಾಗಣೆಯಂತಹ ಪ್ರಕರಣಗಳು ಪತ್ತೆಯಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಅತಿ ಹೆಚ್ಚಾಗಿ ಸೆರೆಸಿಕ್ಕವರು ಯುವಕರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯಕ್ಕೆ ತನ್ನದೇ ಆದ ಹಿರಿಮೆ ಮತ್ತು ಇತಿಹಾಸವಿದ್ದು ಅದನ್ನು ಉಳಿಸಿ, ಬೆಳೆಸಬೇಕಿರುವುದು ರಾಜ್ಯದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕಿದೆ ಎಂದರು.

ಡ್ರಗ್ಸ್ ಎಂಬ ಚಟಕ್ಕೆ ಬಿದ್ದು ಹಲವರು ತಮ್ಮ ಜೀವನದ ಅಂತ್ಯವನ್ನು ಕಂಡುಕೊಂಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಕನಸಿನತ್ತ ಮಾತ್ರ ಗುರಿಯಾಗಿಸಿಕೊಂಡು ನಡೆದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವ್ಯಸನಿಗಳಾದವರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಜತೆಗೆ ತಮ್ಮ ಕುಟುಂಬವನ್ನು ಕೂಡ ಬಲಿ ತೆಗೆದುಕೊಳ್ಳುತ್ತಾರೆ. ಮಾದಕ ವಸ್ತು ಬಳಕೆ ಹಾಗೂ ಸಾಗಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ಪೊಲೀಸ್ ಇಲಾಖೆ ಜತೆಗೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೂಡ ಸಹಕರಿಸಬೇಕಿದೆ. ಆಗ ಮಾತ್ರ ಸ್ವಾಸ್ಥೃ ಸಮಾಜವನ್ನು ಕಟ್ಟಲು ಸಾಧ್ಯವಾಗುವ ಜತೆಗೆ ನಶೆಮುಕ್ತ ಕರ್ನಾಟಕ ಮಾಡಬಹುದಾಗಿದೆ ಎಂದರು.

ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಮಾತನಾಡಿ, ಮಾದಕ ವಸ್ತುಗಳ ಶೇಖರಣೆ, ವಿತರಣೆ ಮತ್ತು ಬಳಕೆಯು ಕಾನೂನು ವಿರುದ್ಧವಾಗಿದ್ದು ಅದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಇಂದು ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ವಿದ್ಯಾರ್ಥಿಗಳಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ದೇಶದ ಆಸ್ತಿಯಾಗಬೇಕಾದವರು ತಮ್ಮ ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ದೇಶಕ್ಕೆ ಮಾರಕವಾದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗುತ್ತಿದೆ. ಅನಕ್ಷರಸ್ಥರಿಗೆ ಕಾನೂನಿನ ಅರಿವು ಮೂಡಿಸಬೇಕಾದಂತಹ ಯುವಪೀಳಿಗೆ ಇಂದು ಕಾನೂನು ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಾದಕ ವ್ಯಸನಮುಕ್ತ ರಾಜ್ಯ ನಿರ್ಮಿಸುವಲ್ಲಿ ನಮ್ಮ ಸಂಸ್ಥೆ ಎಲ್ಲ ರೀತಿಯಲ್ಲಿಯೂ ಪೊಲೀಸ್ ಇಲಾಖೆ ಜತೆ ಕೈಜೋಡಿಸಲಿದೆ ಎಂದರು.

ಆರಕ್ಷಕ ವೃತ್ತ ನಿರೀಕ್ಷಕ ನಿರಂಜನ್, ಬೆಳ್ಳೂರು ಪಿಎಸ್‌ಐ ರವಿಕುಮಾರ್ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಾಗೃತಿ ಜಾಥಾವು ವಿವಿ ಆವರಣದಿಂದ ಬೆಳ್ಳೂರು ಕ್ರಾಸ್‌ವರೆಗೆ ನಡೆಯಿತು. ಜಾಥಾದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಕಾಲೇಜಿನ ಸಿಬ್ಬಂದಿ ಸೇರಿದಂತೆ ಮತ್ತಿತರರು ಪಾಲ್ಗೊಂಡು ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಆದಿಚುಂಚನಗಿರಿ ವಿವಿ ಉಪಕುಲಪತಿ ಡಾ.ಎಂ.ಎ.ಶೇಖರ್, ವಿವಿ ರಿಜಿಸ್ಟ್ರಾರ್ ಸುಬ್ಬರಾಯ್, ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಚಂದನ್‌ರಾಜ್ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net