ನಾಯಿಮರಿಯನ್ನು ಬರ್ಬರವಾಗಿ ಕೊಂದ ವಿಕೃತ ಯುವಕ; ವಿಡಿಯೋ ವೈರಲ್​ ಮಾಡಿ ಸಿಕ್ಕಿಬಿದ್ದ

Puppy
Published on

ರಾಜ್​ಕೋಟ್​: ಕೆಲವರು ಅದೆಷ್ಟು ವಿಕೃತ ಮನಸ್ಥಿತಿಯವರು ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಒಂದು ಮುದ್ದಾದ ನಾಯಿಮರಿಯನ್ನು ಅದರ ಮಾಲೀಕನೇ ಬರ್ಬರವಾಗಿ ಕೊಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್​ ಆಗಿ..ಇದೀಗ ಆರೋಪಿ ಪೊಲೀಸರಿಂದ ಬಂಧಿತನಾಗಿದ್ದಾನೆ.

ಘಟನೆ ನಡೆದದ್ದು ಗುಜರಾತ್​ನ ರಾಜ್​ಕೋಟ್​​ನಲ್ಲಿ. ತುಂಬ ಸಿಟ್ಟಿನಲ್ಲಿರುವ ಓರ್ವ ಯುವಕ ನಾಯಿ ಮರಿಯ ಕುತ್ತಿಗೆಯನ್ನು ಒರಟಾಗಿ ಹಿಡಿದುಕೊಂಡು, ಅದು ಸಾಯುವವರೆಗೂ ಕತ್ತು ಹಿಸುಕಿದ್ದಾನೆ. ಅದು ವಿಲವಿಲ ಒದ್ದಾಡಿ ಕೊನೆಗೂ ಜೀವ ಬಿಟ್ಟಿದೆ. ಆತ ತಾನು ನಾಯಿ ಮರಿಯನ್ನು ಕೊಂದದ್ದನ್ನು ಚಿತ್ರೀಕರಿಸಿ ಆ ವಿಡಿಯೋವನ್ನು ತನ್ನ ಸ್ನೇಹಿತರಿಗೆ ಕಳಿಸಿದ್ದ.

ಹೀಗೆ ಆ ಯುವಕ ನಾಯಿ ಮರಿಯನ್ನು ಕ್ರೂರವಾಗಿ ಕೊಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಅದನ್ನು ನೋಡಿದ ಎಥಿಕಲ್​ ಟ್ರೀಟ್​ಮೆಂಟ್​ ಆಫ್​ ಎನಿಮಲ್​ (PETA)ದ ಕೆಲವು ಸಿಬ್ಬಂದಿ ಅದನ್ನು ಗಾಂಧಿಧಾಮ ಪೊಲೀಸರ ಗಮನಕ್ಕೆ ತಂದಿದ್ದರು.

ವಿಡಿಯೋವನ್ನು ಸೂಕ್ಷ್ಮವಾಗಿ ನೋಡಿದ ಪೊಲೀಸ್​ ಸಿಬ್ಬಂದಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಆದಿಪುರ್​ ಪಟ್ಟಣದ ಬಳಿ ಇರುವ ರೆಸಾರ್ಟ್​ವೊಂದರ ನೌಕರ ಈತ ಎಂಬುದು ಬೆಳಕಿಗೆ ಬಂದಿದೆ.

ಆರೋಪಿಯನ್ನು ನಾಗಾಲ್ಯಾಂಡ್​ ಮೂಲದ ಸಂಗಾತಮ್​ ಎಂದು ಗುರುತಿಸಲಾಗಿದೆ. ಆ ನಾಯಿಮರಿ ತನ್ನ ಕೋಣೆಯನ್ನು ಕೊಳೆ ಮಾಡಿದೆ ಎಂಬ ಕಾರಣಕ್ಕೆ ಅಷ್ಟು ಬರ್ಬರವಾಗಿ ಹತ್ಯೆ ಮಾಡಿದ್ದಾಗಿ ಹೇಳಿದ್ದಾನೆ.

ಪೆಟಾದ ಸದಸ್ಯೆಯಾದ ನೇಹಾ ಚತುರ್ವೇದಿ ಎಂಬುವರು ವಿಡಿಯೋ ಕ್ಲಿಪ್​ ಜತೆ, ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಆರೋಪಿ ಪೊಲೀಸರ ವಶದಲ್ಲಿದ್ದು, ಆತನಿಗೆ ಕೊವಿಡ್​-19 ಟೆಸ್ಟ್ ಮಾಡಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net