ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿ ದೈಹಿಕ ಸಂಪರ್ಕಕ್ಕೆ ಬಾಲೆಗೆ ಒತ್ತಾಯ, ಆತ್ಮಹತ್ಯೆಗೆ ಯತ್ನ

suicide attempt
Published on

ವೆಲ್ಲೋರ್​: ನೆರೆಹೊರೆಯ ಮೂವರು ಯುವಕರು 15 ವರ್ಷದ ಬಾಲಕಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿಕೊಂಡು ದೈಹಿಕ ಸಂಪರ್ಕಕ್ಕೆ ಬ್ಲ್ಯಾಕ್​ಮೇಲ್​ ಮಾಡಿದ್ದರಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.

ಶನಿವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆಕೆ ಬೆಂಕಿ ಹಚ್ಚಿಕೊಂಡಿದ್ದಳು. ಆದರೆ, ಆಕೆಯ ಚೀರಾಟ ಕೇಳಿಸಿಕೊಂಡು ಆಕೆಯ ನೆರವಿಗೆ ಧಾವಿಸಿದ ಅಕ್ಕಪಕ್ಕದ ಮನೆಯವರು, ಬೆಂಕಿ ನಂದಿಸಿ ವೆಲ್ಲೋರ್​ನ ಸರ್ಕಾರಿ ವೆಲ್ಲೋರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶೇ.90 ಸುಟ್ಟುಗಾಯಗಳಿಂದ ಬಳಲುತ್ತಿರುವ ಸಂತ್ರಸ್ತೆ ತನಗೆ ಬ್ಲ್ಯಾಕ್​ಮೇಲ್​ ಮಾಡಿದ ಯುವಕರನ್ನು ನೆರೆಮನೆಯ ಕೆ. ಆಕಾಶ್​, ಆರ್​. ಗಣಪತಿ ಮತ್ತು 17 ವರ್ಷದ ಬಾಲಕ ಎಂದು ಗುರುತಿಸಿದ್ದಾಳೆ. ಈ ಮೂರು ಮಂದಿ ತಾನು ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಅದನ್ನು ದೈಹಿಕ ಸಂಪರ್ಕಕ್ಕೆ ಸಹಕರಿಸದಿದ್ದರೆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದರು. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಗಿ ಆಕೆ ಹೇಳಿರುವುದಾಗಿ ಪೊಲೀಸ್ ಸಬ್​ಇನ್​ಸ್ಪೆಕ್ಟರ್​ ಶುಭಾ ತಿಳಿಸಿದ್ದಾರೆ.

ಸದ್ಯ ಮೂವರು ಯುವಕರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತೆ ಇದೀಗ ಪ್ರಜ್ಞಾಹೀನಸ್ಥಿತಿಯಲ್ಲಿದ್ದು, ದೇಹಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net