

ಹೈದರಾಬಾದ್: ನಾನು ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡಿದ್ದೇನೆ. ಪ್ಲಾಸ್ಮಾ ದಾನ ಮಾಡಲು ಸಿದ್ಧನಿದ್ದೇನೆ. ಅಷ್ಟೇ ಅಲ್ಲ, ಆ್ಯಂಟಿವೈರಲ್ ಇಂಜೆಕ್ಷನ್ ಟೊಚಿಲಿಜುಮಾಬ್ 400 ಎಂಜಿ ಸೇರಿ ನೀವು ಕೇಳುವ ಆ್ಯಂಟಿವೈರಲ್ ಚುಚ್ಚುಮದ್ದುಗಳನ್ನು ತಂದು ಕೊಡುತ್ತೇನೆ ಎಂದು ನಂಬಿಸಿ 200ಕ್ಕೂ ಹೆಚ್ಚು ಜನರನ್ನು ವಂಚಿಸಿದವ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ಸಂದೀಪ್ ರೆಡ್ಡಿ (25) ಬಂಧಿತ. ಆನ್ಲೈನ್ನಲ್ಲಿ ಪ್ಲಾಸ್ಮಾಕ್ಕಾಗಿ ಹುಡುಕಾಡುತ್ತಿರುವ ಕೋವಿಡ್ ಸೋಂಕಿತರ ಸಂಬಂಧಿಕರು ಮತ್ತು ಆ್ಯಂಟಿವೈರಲ್ ಚುಚ್ಚುಮದ್ದುಗಳಿಗಾಗಿ ಅರಸುತ್ತಿರುವವರನ್ನೇ ಗುರಿಯಾಗಿಸಿಕೊಂಡು ಸಂದೀಪ್ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ಲಾಸ್ಮಾಕ್ಕಾಗಿ ಹುಡುಕಾಡುತ್ತಿರುವವರನ್ನು ಪ್ಲಾಸ್ಮಾ ದಾನಿಯಂತೆ ಹಾಗೂ ರೋಗನಿರೋಧಕ ಚುಚ್ಚುಮದ್ದುಗಳನ್ನು ಹುಡುಕುತ್ತಿರುವವರನ್ನು ಚುಚ್ಚುಮದ್ದುಗಳ ವಿತರಕನ ರೂಪದಲ್ಲಿ ಪರಿಚಯಿಸಿಕೊಳ್ಳುತ್ತಿದ್ದ ಸಂದೀಪ್, ತಾನಿರುವ ಸ್ಥಳದಿಂದ ಪ್ಲಾಸ್ಮಾ ಬೇಕಾದವರು ಇರುವ ಸ್ಥಳಕ್ಕೆ ಬಂದು ಹೋಗುವ ಖರ್ಚುವೆಚ್ಚದ ನೆಪದಲ್ಲಿ ಹಾಗೂ ಪ್ಲಾಸ್ಮಾ ದಾನ ಮಾಡಿದ್ದಕ್ಕಾಗಿ ಶುಲ್ಕವೆಂದು ಮುಂಗಡವಾಗಿ ಹಣ ಪಡೆಯುತ್ತಿದ್ದ. ಅಂತೆಯೇ ಚುಚ್ಚುಮದ್ದು ಬೇಕಾದವರಿಂದ ಮುಂಗಡವಾಗಿಯೇ ಹಣಪಡೆದುಕೊಳ್ಳುತ್ತಿದ್ದ. ಆನ್ಲೈನ್ ಮೂಲಕ ಹಣ ಸೇರುತ್ತಿದ್ದಂತೆ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಮುಗಮ್ಮಾಗಿಬಿಡುತ್ತಿದ್ದ ಎಂದು ವಿವರಿಸಿದ್ದಾರೆ.
ಹೈದರಾಬಾದ್ ಪೊಲೀಸ್ನ ಹೆಚ್ಚುವರಿ ಡಿಸಿಪಿ ಜಿ. ಚಕ್ರವರ್ತಿಯವರ ಪ್ರಕಾರ ಸಂದೀಪ್ ವಿಶಾಖಾಪಟ್ಟಣದಲ್ಲಿ ಎರಡು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ. ಜೈಲಿನಲ್ಲಿ ಕುಳಿತು ಕೋವಿಡ್-19 ಪರಿಸ್ಥಿತಿಯ ಲಾಭ ಪಡೆಯಲು ಸಂಚು ರೂಪಿಸಿದ್ದ. ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ತನ್ನ ಯೋಜನೆಯನ್ನು ಜಾರಿಗೊಳಿಸಿ ಕನಿಷ್ಠ ಎಂದರೂ 20 ಲಕ್ಷ ರೂ.ಗೂ ಹೆಚ್ಚಿನ ಮೊತ್ತಕ್ಕೆ ವಂಚಿಸಿದ್ದಾನೆ ಎಂದು ಹೇಳಿದ್ದಾರೆ.