Right to Choose Spouse: ಇಷ್ಟದವರನ್ನೇ ಮದುವೆಯಾದ ಯುವತಿಗೆ ಮುಕ್ತವಾಗಿ ಬದುಕಲು ಅಲಹಾಬಾದ್ ಹೈಕೋರ್ಟ್ ಅವಕಾಶ ನೀಡಿದೆ. ತಂದೆಯ ವಶದಿಂದ ಬಿಡುಗಡೆ ಮಾಡಿದ ಕೋರ್ಟ್, ಮುಸ್ಲಿಂ ಪತಿ ಅಕ್ಬರ್ ಖಾನ್ ಜತೆ ಜೀವಿಸಲು ಆಕೆ ಸ್ವತಂತ್ರಳು ಎಂದು ಸ್ಪಷ್ಟಪಡಿಸಿದೆ.
ತನ್ನ ಇಚ್ಛೆಯಂತೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡ ಯುವತಿಗೆ ಅಲಹಾಬಾದ್ ಹೈಕೋರ್ಟ್ ಮುಕ್ತವಾಗಿ ಬದುಕಲು ಅವಕಾಶ ನೀಡಿದೆ. ತಂದೆಯ ವಶದಲ್ಲಿದ್ದ ಘಾಜಿಯಾಬಾದ್‌ನ 26 ವರ್ಷದ ಸೋನಿಕಾ ಚೌಹಾಣ್ ಅವರನ್ನು ಬಿಡುಗಡೆ ಮಾಡಿದ ಕೋರ್ಟ್, ಅವರು ಮುಸ್ಲಿಂ ಪತಿ ಅಕ್ಬರ್ ಖಾನ್ ಜತೆ ವಾಸಿಸಲು ಸ್ವತಂತ್ರರು ಎಂದು ಹೇಳಿದೆ.
ಅಕ್ಬರ್ ಖಾನ್ ಜೊತೆಗಿನ ಮದುವೆಯನ್ನು ತಂದೆ ಒಪ್ಪದ ಕಾರಣ ತಮ್ಮನ್ನು ಮನೆಯಲ್ಲಿ ಇರಿಸಲಾಗಿದೆ ಎಂದು ಸೋನಿಕಾ ಆರೋಪಿಸಿದ್ದರು. ವಿಚಾರಣೆ ವೇಳೆ, ತಾನು ಸ್ವಯಂಪ್ರೇರಣೆಯಿಂದ ಅಕ್ಬರ್ ಅವರನ್ನು ಮದುವೆಯಾಗಿದ್ದು, ಅವರೊಂದಿಗೇ ವಾಸಿಸಲು ಬಯಸುವುದಾಗಿ ಕೋರ್ಟ್‌ಗೆ ತಿಳಿಸಿದರು.
ಇದಕ್ಕೆ ಅಕ್ಬರ್ ಖಾನ್ ಕೂಡ ಸೋನಿಕಾ ಜೊತೆ ವಾಸಿಸಲು ಸಿದ್ಧ ಎಂದು ಹೇಳಿದರು. ಆದರೆ, ಸೋನಿಕಾ ಅವರನ್ನು ಅಕ್ಬರ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಹಾಗೂ ಒತ್ತಡಕ್ಕೆ ಒಳಗಾಗಿರಬಹುದು ಎಂದು ಆಕೆಯ ತಂದೆ ವಾದಿಸಿದರು.
ಇಬ್ಬರೊಂದಿಗೆ ಮಾತನಾಡಿದ ಬಳಿಕ, ಪ್ರಾಪ್ತವಯಸ್ಕರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಇಚ್ಛೆಯಂತೆ ಬದುಕುವ ಹಕ್ಕಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಈ ವೈಯಕ್ತಿಕ ನಿರ್ಧಾರದಲ್ಲಿ ಪೋಷಕರು ಅಥವಾ ಕುಟುಂಬದವರು ಹಸ್ತಕ್ಷೇಪಿಸಲು ಸಾಧ್ಯವಿಲ್ಲ ಎಂದಿತು.
ಸೋನಿಕಾ ತಮ್ಮ ಪತಿಯೊಂದಿಗೆ ವಾಸಿಸಬಹುದು ಎಂದು ಹೇಳಿದ ಕೋರ್ಟ್, ದಂಪತಿಗೆ ಅಗತ್ಯ ಭದ್ರತೆ ನೀಡುವಂತೆ ಪೊಲೀಸರಿಗೆ ಸೂಚಿಸಿತು. ಅವರ ವೈವಾಹಿಕ ಜೀವನದಲ್ಲಿ ಕುಟುಂಬದವರು ಹಸ್ತಕ್ಷೇಪ ಮಾಡದಂತೆಯೂ ನಿರ್ದೇಶನ ನೀಡಿತು. (ಏಜೆನ್ಸೀಸ್)