ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ದೋಸೆ ಹಾಕಿದ ಸಿಂಧಿಯಾ
ಗ್ರಾಹಕರಿಗೆ ತಾವೇ ದೋಸೆ ಸರ್ವ್ ಮಾಡಿದ ಕೇಂದ್ರ ಸಚಿವ
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಸ್ವಚ್ಛತೆ ಬಗ್ಗೆ ಪ್ರಶ್ನೆ
Jyotiraditya Scindia: ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಿಚನ್‌ಗೆ ಎಂಟ್ರಿ ಕೊಟ್ಟು ದೋಸೆ ಮಾಡಿದ್ದಾರೆ. ದೋಸೆ ಮಾಡಿ ಚಟ್ನಿ, ಸಾಂಬಾರ್ ಜೊತೆ ಗ್ರಾಹಕರಿಗೆ ಸರ್ವ್ ಮಾಡಿರುವ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಿಳಿ ಕುರ್ತಾ ಧರಿಸಿದ್ದ ಸಿಂಧಿಯಾ, ಕೆಫೆ ಸಿಬ್ಬಂದಿಯೊಂದಿಗೆ ಮಾತಾಡಿದ ಬಳಿಕ ನೇರವಾಗಿ ದೋಸೆ ಮಾಡುವ ಜಾಗಕ್ಕೆ ತೆರಳಿದ್ದಾರೆ. ಅಲ್ಲಿದ್ದ ಶೆಫ್‌ಗಳ ಮಾರ್ಗದರ್ಶನದಲ್ಲಿ ದೋಸೆ ಮಾಡಿದ್ದಾರೆ. ಬಳಿಕ ಸಿಬ್ಬಂದಿಯ ಕೆಲಸವನ್ನು ಮೆಚ್ಚಿ, ‘ನೀವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ’ ಎಂದಿದ್ದಾರೆ.
ತಮ್ಮ ಅನುಭವದ ಬಗ್ಗೆ ಪೋಸ್ಟ್ ಮಾಡಿರುವ ಸಿಂಧಿಯಾ, ದೋಸೆ ಮಾಡುವುದು ಹೊರಗಿನಿಂದ ನೋಡಿದಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿಗೆ ಬಂದಾಗ ರಾಮೇಶ್ವರಂ ಕೆಫೆಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಲು ಆಗಲಿಲ್ಲ ಎಂದೂ ಅವರು ಬರೆದುಕೊಂಡಿದ್ದಾರೆ.
ದೋಸೆ ಮಾತ್ರವಲ್ಲ, ಬೆಂಗಳೂರಿನ ಮತ್ತೊಂದು ಫೇಮಸ್ ಐಟಂ ಫಿಲ್ಟರ್ ಕಾಫಿಯನ್ನೂ ಸಿಂಧಿಯಾ ಟ್ರೈ ಮಾಡಿದ್ದಾರೆ. ಎರಡು ಕಪ್‌ಗಳ ನಡುವೆ ಕಾಫಿ ಸುರಿಯುವ ಸಾಂಪ್ರದಾಯಿಕ ಶೈಲಿಯಲ್ಲಿ ಕಾಫಿ ಹಾಕಿರುವ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ. ‘ನನ್ನ ಫಿಲ್ಟರ್ ಕಾಫಿ, ಅಚ್ಚುಕಟ್ಟಾಗಿ ಸಿದ್ಧವಾಗಿದೆ.!’ ಎಂದು ಪೋಸ್ಟ್ ಮಾಡಿದ್ದಾರೆ.
ಸಿಂಧಿಯಾ ದೋಸೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಚಿವರ ಈ ಪ್ರಯತ್ನವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಆಹಾರ ತಯಾರಿಸುವಾಗ ಗ್ಲೌಸ್ ಮತ್ತು ಕ್ಯಾಪ್ ಬಳಸಿಲ್ಲ ಎಂದು ಪ್ರಶ್ನಿಸಿದ್ದಾರೆ.
‘ಗ್ಲೌಸ್ ಬಳಸಿ’, ‘ಕನಿಷ್ಠ ಕ್ಯಾಪ್ ಆದರೂ ಹಾಕಬೇಕಿತ್ತು’ ಎಂಬ ರೀತಿಯ ಕಾಮೆಂಟ್‌ಗಳು ಕೂಡ ಬಂದಿವೆ. ಇನ್ನು ಕೆಲವರು ರಾಮೇಶ್ವರಂ ಕೆಫೆಯ ಮೇಲಿನ ಹೈಪ್ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ಸಿಂಧಿಯಾ ಅವರ ದೋಸೆ ಮತ್ತು ಫಿಲ್ಟರ್ ಕಾಫಿ ವಿಡಿಯೋಗಳು ಬೆಂಗಳೂರಿನ ಫುಡ್ ಲವರ್ಸ್ ಮತ್ತು ನೆಟ್ಟಿಗರ ಗಮನ ಸೆಳೆದಿವೆ.(ಏಜೆನ್ಸಿಸ್)