ಶೌಚಾಲಯದಲ್ಲಿ ಮೊಬೈಲ್ ಸ್ಕ್ರಾಲ್ ಮಾಡುತ್ತಾ ಸಮಯ ಕಳೆಯುತ್ತೀರಾ?
ಟಾಯ್ಲೆಟ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಹೊತ್ತು ಕೂರುವುದು ಒಳ್ಳೆಯದಲ್ಲ
ಈ ಅಭ್ಯಾಸ ಬಿಡಲು ಮೊಬೈಲ್‌ನ್ನು ಹೊರಗೇ ಇಟ್ಟು ಹೋಗಿ
Phone in Toilet: ಶೌಚಾಲಯಕ್ಕೆ ಹೋಗುವಾಗ ಕೈಯಲ್ಲಿ ಮೊಬೈಲ್ ಇರಲೇಬೇಕು. ಕುಳಿತ ತಕ್ಷಣ ಸೋಷಿಯಲ್ ಮೀಡಿಯಾ, ರೀಲ್ಸ್ ಅಥವಾ ವಿಡಿಯೋ ನೋಡೋದು ಶುರು. ಐದು ನಿಮಿಷ ಅಂತ ಹೋಗಿ, ಅರ್ಧ ಗಂಟೆ ಕಳೆದಿದ್ದೇ ಗೊತ್ತಾಗಲ್ಲ. ಇಂದಿನ ದಿನಗಳಲ್ಲಿ ಇದು ಹಲವರ ದಿನಚರಿಯ ಭಾಗವಾಗಿದೆ.
ಆದ್ರೆ ಶೌಚಾಲಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಹೊತ್ತು ಕುಳಿತು ಮೊಬೈಲ್ ನೋಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದ್ರೆ ಈ ಅಭ್ಯಾಸ ಯಾಕೆ ಬರುತ್ತೆ? ಇದರಿಂದ ಆಗುವ ಸಮಸ್ಯೆಗಳೇನು? ಈ ಅಭ್ಯಾಸವನ್ನು ಹೇಗೆ ಬಿಡಬಹುದು? ಇಲ್ಲಿದೆ ಸರಳ ಮಾಹಿತಿ.
ಸೋಷಿಯಲ್ ಮೀಡಿಯಾ, ರೀಲ್ಸ್ ಅಥವಾ ಗೇಮ್‌ನಲ್ಲಿ ತೊಡಗಿಕೊಂಡರೆ ಸಮಯದ ಅರಿವೇ ಇರುವುದಿಲ್ಲ. ಒಂದು ವಿಡಿಯೋ ಬಳಿಕ ಮತ್ತೊಂದು ಅಂತ ಸ್ಕ್ರಾಲ್ ಮಾಡುತ್ತಾ ಹೋದರೆ, ‘ಎರಡು ನಿಮಿಷ ನೋಡ್ತೀನಿ’ ಅಂತ ಶುರು ಮಾಡಿದ್ದು ಸಾಕಷ್ಟು ಹೊತ್ತಿನವರೆಗೆ ಮುಂದುವರಿಯಬಹುದು.
ಮನೆ, ಆಫೀಸ್ ಕೆಲಸಗಳ ನಡುವೆ ಕೆಲವರಿಗೆ ಶೌಚಾಲಯದಲ್ಲಿ ಮಾತ್ರ ಏಕಾಂತ ಸಿಗುತ್ತದೆ. ಯಾರೂ ಡಿಸ್ಟರ್ಬ್ ಮಾಡಲ್ಲ ಅಂತ ಅಲ್ಲೇ ಮೊಬೈಲ್ ನೋಡುತ್ತಾ ರಿಲ್ಯಾಕ್ಸ್ ಆಗುವ ಅಭ್ಯಾಸ ಬೆಳೆಬಹುದು. ಸಮಸ್ಯೆ ಮೊಬೈಲ್‌ನಲ್ಲಲ್ಲ, ಶೌಚಾಲಯವನ್ನೇ ಮೊಬೈಲ್ ಬಳಸುವ ಜಾಗವನ್ನಾಗಿ ಮಾಡಿಕೊಳ್ಳುವುದರಲ್ಲಿ..
ಶೌಚಾಲಯದ ಸೀಟಿನ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಗುದದ್ವಾರದ ಸುತ್ತಲಿನ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗಬಹುದು. ವಿಶೇಷವಾಗಿ ಮಲವಿಸರ್ಜನೆಗೆ ಒತ್ತಾಯ ಮಾಡುತ್ತಾ ಹೆಚ್ಚು ಹೊತ್ತು ಕುಳಿತುಕೊಳ್ಳುವ ಅಭ್ಯಾಸ ಮೂಲವ್ಯಾಧಿ ಸೇರಿದಂತೆ ಕೆಲವು ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು.
ಇದಲ್ಲದೆ, ಮಲಬದ್ಧತೆಯಿಂದ ಈಗಾಗಲೇ ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯುವವರು ಮೊಬೈಲ್ ಬಳಸುತ್ತಾ ಇನ್ನಷ್ಟು ಸಮಯ ಕುಳಿತುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಮಲವಿಸರ್ಜನೆ ಮುಗಿದ ನಂತರವೂ ಮೊಬೈಲ್ ನೋಡುತ್ತಾ ಅಲ್ಲೇ ಕುಳಿತುಕೊಳ್ಳುವ ಬದಲು ಹೊರಗೆ ಬರುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.
1. ಮೊಬೈಲ್ ಹೊರಗೇ ಇಡಿ: ಶೌಚಾಲಯಕ್ಕೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗಬೇಡಿ.
2. ಸಮಯದ ಮಿತಿ ಇಡಿ: ಅಗತ್ಯಕ್ಕಿಂತ ಹೆಚ್ಚು ಹೊತ್ತು ಕೂರದೆ, ಮಲವಿಸರ್ಜನೆ ಆಗದಿದ್ದರೆ ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ.
3. ಮಲಬದ್ಧತೆ ಗಮನಿಸಿ: ಸಾಕಷ್ಟು ನೀರು, ನಾರಿನಂಶದ ಆಹಾರ ಮತ್ತು ವ್ಯಾಯಾಮಕ್ಕೆ ಆದ್ಯತೆ ನೀಡಿ.
4. ‘ನೋ-ಫೋನ್ ಟಾಯ್ಲೆಟ್’ ನಿಯಮ ಮಾಡಿ: ಮನೆಯಲ್ಲಿರುವ ಎಲ್ಲರೂ ಶೌಚಾಲಯಕ್ಕೆ ಮೊಬೈಲ್ ತೆಗೆದುಕೊಂಡು ಹೋಗದ ಅಭ್ಯಾಸ ಬೆಳೆಸಿಕೊಳ್ಳಿ.
ಈ ಅಭ್ಯಾಸವನ್ನು ಒಂದೇ ದಿನದಲ್ಲಿ ಬಿಡಬೇಕಿಲ್ಲ. ಮೊದಲು ದಿನಕ್ಕೆ ಒಂದು ಬಾರಿ ಮೊಬೈಲ್ ಇಲ್ಲದೆ ಶೌಚಾಲಯಕ್ಕೆ ಹೋಗಿ. ನಂತರ ನಿಧಾನವಾಗಿ ಪ್ರತಿ ಬಾರಿಯೂ ಫೋನ್ ಹೊರಗಿಡುವ ಅಭ್ಯಾಸ ಬೆಳೆಸಿಕೊಳ್ಳಿ.