

ಬೆಂಗಳೂರು: ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ನಿರ್ವಾಹಕ ಚಲಾಯಿಸಿದ್ದ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
ಪೀಣ್ಯ ಎರಡನೇ ಹಂತದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದೆ.
ಮಂಡ್ಯ ಮೂಲದ ಹಾಗೂ ಹೆಗ್ಗನಹಳ್ಳಿ ನಿವಾಸಿ ಸುಮಾ ನಾಯಕ್ (೨೫) ಮೃತಪಟ್ಟವರು. ಪವನ, ಸುನೀತಾ, ಕೀರ್ತನಾ, ಮತ್ತು ಸನ್ಮಾ ಗಾಯಗೊಂಡವರು. ಸುನೀತಾ ಎಲೆಕ್ಟ್ರಿಕ್ ಬಸ್ ಒಳಗೆ ಇದ್ದವರು ಮತ್ತು ಇತರರು ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿದ್ದರು.
ಹೆಬ್ಬಾಳದ ಖಾಸಗಿ ಕಂಪನಿಯಲ್ಲಿ ಟೆಲಿಕಾಲರ್ ಆಗಿದ್ದ ಸುಮಾ, ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ಹೋಗಲು ಪೀಣ್ಯದ ಬಸ್ ನಿಲ್ದಾಣಕ್ಕೆ ಬಂದಿದ್ದರು. ಅದೇ ಸ್ಥಳದಲ್ಲಿ ಇನ್ನೂ ಹಲವರು ಬಸ್‌ಗಾಗಿ ಕಾಯುತ್ತಿದ್ದರು. ಬೆಳಿಗ್ಗೆ ೮.೧೫ ಕ್ಕೆ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಬಿಎಂಟಿಸಿ ಬಸ್ ನಿಯಂತ್ರಣ ತಪ್ಪಿ, ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿ ಹೊಡೆಯಿತು. ರಸ್ತೆ ಬದಿಯಲ್ಲಿದ್ದ ಕ್ಯಾಂಟೀನ್‌ಗೂ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಗಾಯಗೊಂಡರು. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಮಾ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೊಬ್ಬರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಚಾಲಕ ಶೌಚಗೃಹಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಹಿಂದೆ ಬೇರೆ ಬಸ್‌ಗಳು ಬಂದು ಜಾಮ್ ಆಗುತ್ತದೆ ಎಂದು ನಿರ್ವಾಹಕನೇ ಬಸ್ ಅನ್ನು ಸ್ವಲ್ಪ ಮುಂದೆ ನಿಲ್ಲಿಸಲು ಚಾಲನೆ ಮಾಡಿದ್ದರು. ಆಗ ಬಸ್ ನಿಯಂತ್ರಣಕ್ಕೆ ಸಿಗದೆ ಫುಟ್‌ಪಾತ್ ಮೇಲೆ ಹತ್ತಿದ್ದರಿಂದ ಅಪಘಾತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಎಂಟಿಸಿ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಸ್ಥಳಕ್ಕೆ ಬಿಎಂಟಿಸಿ ಅಧಿಕಾರಿಗಳ ಭೇಟಿ:
ಟಾಟಾ ಮೊಬಿಲಿಟಿ ಲಿಮಿಟೆಡ್ ಸಂಸ್ಥೆಗೆ ಸೇರಿದ ವಿದ್ಯುತ್ ಚಾಲಿತ ಬಸ್ ಅಪಘಾತಕ್ಕೀಡಾಗಿದೆ. ವಾಹನವು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕ್ಯಾಂಟೀನ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕ್ಯಾಂಟೀನ್ ಹತ್ತಿರದಲ್ಲಿದ್ದ ಯುವತಿ ಮೃತಪಟ್ಟಿದ್ದಾರೆ. ಅಪಘಾತದ ಸ್ಥಳಕ್ಕೆ ಈಶಾನ್ಯ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ, ವಿಭಾಗೀಯ ಸಂಚಾರ ಅಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪ್ರಯಾಣಿಕರ ಮತ್ತು ಸಾರ್ವಜನಿಕರ ಸುರಕ್ಷತೆಗೆ ಸಂಸ್ಥೆಯ ಪ್ರಥಮ ಆದ್ಯತೆಯಾಗಿದ್ದು ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ಗಾಯಾಳುಗಳ ಚಿಕಿತ್ಸೆಯ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ವಾಹಕ ರಮೇಶ್ ಅವರು ಚಾಲಕನ ಸೀಟಿನಲ್ಲಿ ಕುಳಿತು ಬಸ್‌ನ ಇಂಜಿನ್ ಆನ್ ಮಾಡಿದ್ದು, ಕೆಲವು ಸೆಕೆಂಡುಗಳ ಕಾಲ ಅವರಿಗೆ ಬಸ್ ಚಲಾಯಿಸಲು ಸಾಧ್ಯವಾಗಲಿಲ್ಲ. ಅವರ ಮುಖದಲ್ಲಿ ಗೊಂದಲ ಕಾಣಿಸುತ್ತಿತ್ತು. ಆತ ಕೆಳಗೆ, ಎಡ ಮತ್ತು ಬಲಕ್ಕೆ ನೋಡುತ್ತಿದ್ದ. ನಂತರ, ಇದ್ದಕ್ಕಿದ್ದಂತೆ ಬಸ್ ಚಲಿಸಿ ರಮೇಶ್ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ.
ಬಸ್ ಪ್ರಯಾಣಿಕರಿಗೆ ಡಿಕ್ಕಿ ಹೊಡೆದು, ನಂತರ ಉಪಾಹಾರ ಗೃಹಕ್ಕೆ ಡಿಕ್ಕಿ ಹೊಡೆದು ನಿಂತಿತು. ಗ್ಯಾಸ್ ಸ್ಟೌವ್ ಬಿದ್ದ ಕಾರಣ ಸಣ್ಣ ಬೆಂಕಿ ಕಾಣಿಸಿಕೊಂಡಿತು. ಸ್ಥಳೀಯರು ಬೇಗನೆ ಬೆಂಕಿಯನ್ನು ನಂದಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.