ಉಡುಪಿಯ ಶರತ್ ಸಾವಿನಿಂದಲೂ ಎಚ್ಚೆತ್ತುಕೊಳ್ಳದ ಯುವಕರು​: ಯಾದಗಿರಿ ಫಾಲ್ಸ್​ನಲ್ಲಿ ಫೋಟೋಗಾಗಿ ದುಸ್ಸಾಹಸ

Water Falls
Published on

ಯಾದಗಿರಿ: ಉಡುಪಿ ಜಿಲ್ಲೆಯ ಯುವಕ ಶರತ್​ ಮೃತಪಟ್ಟರೂ ಯುವ ಜನಾಂಗ ಮಾತ್ರ ಇನ್ನು ಎಚ್ಚೆತ್ತುಕೊಳ್ಳದೇ ಹುಚ್ಚಾಟ ಮುಂದುವರಿಸಿರುವುದು ಕಳವಳಕಾರಿಯಾಗಿದೆ. ಭಾರೀ ಮಳೆಯಿಂದ ರಾಜ್ಯದಲ್ಲಿ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಫೋಟೋ-ವಿಡಿಯೋ ಕ್ರೇಜ್​ಗೆ ಮುಂದಾಗಿರುವ ಯುವ ಜನಾಂಗ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ಕೊಟಗೇರಾ ಗ್ರಾಮದ ಹೊರವಲಯದಲ್ಲಿರುವ ಸೂರಜ್​ ಮಿನಿ ಫಾಲ್ಸ್​ನಲ್ಲಿ ಯುವಕರು ದುಸ್ಸಾಹಸಕ್ಕೆ ಇಳಿಯುತ್ತಿರುವ ಆಘಾತಕಾರಿ ಪ್ರಸಂಗ ಬೆಳಕಿಗೆ ಬಂದಿದೆ. ಪ್ರಾಣದ ಹಂಗು ತೊರೆದು ಪೋಟೋ ಕ್ರೇಜ್​ಗಾಗಿ ಯುವಕ-ಯುವತಿಯರು ಮಿನಿ ಫಾಲ್ಸ್ ಆಳಕ್ಕೆ ಇಳಿತ್ತಿದ್ದಾರೆ.

ಸತತ ಮಳೆಯಿಂದಾಗಿ ಸೂರಜ್​​ ಫಾಲ್ಸ್​ ಮೈದುಂಬಿ ಹರಿಯುತ್ತಿದ್ದು, ಫಾಲ್ಸ್​ನ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಕಳೆದ ಒಂದು ವಾರದಿಂದ ಪ್ರವಾಸಿಗರು ದಂಡು ಹರಿದು ಬರುತ್ತಿದೆ. ಫೋಟೋಗಾಗಿ ಬಂಡೆಗಳ ಮೇಲಿಂದ ಕೆಳಗಿಳಿದು ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ.

ಬಂಡೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಬೃಹತ್​ ಬಂಡೆಗಳಲ್ಲಿ ಪಾಚಿ ಕಟ್ಟಿದೆ. ಸ್ವಲ್ಪ ಯಾಮಾರಿದ್ರೂ ಕಾಲು ಜಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಉಡುಪಿಯಲ್ಲೂ ಶರತ್​ ಇದೇ ಪಾಚಿಗೆ ಕಾಲು ಜಾರಿ ಮೃತಪಟ್ಟಿದ್ದ. ಆತನ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು. ಇಷ್ಟಾದರೂ ಸಹ ಕೆಲವರು ಇನ್ನು ಬುದ್ಧಿ ಕಲಿಯದಿರುವುದು ವಿಪರ್ಯಾಸವೇ ಸರಿ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net