

ಲಖನೌ: ಬಿಜೆಪಿ ಶಾಸಕರ ಮನೆಯಲ್ಲೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಶ್ರೇಷ್ಠ ತಿವಾರಿ (24) ಮೃತ ಯುವಕ. ಲಖನೌದ ಹಜರತ್‌ಗಂಜ್ ಏರಿಯಾದಲ್ಲಿ ಇರುವ ಬಿಜೆಪಿ ಶಾಸಕ ಯೇಗೇಶ್ ಶುಕ್ಲ ಅವರ ಸರ್ಕಾರಿ ನಿವಾಸದಲ್ಲಿ ತಿವಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ತಿವಾರಿ ಬಾರಾಬಂಕಿ ಜಿಲ್ಲೆಯ ಹೈದರ್ಗಢ ಏರಿಯಾದ ನಿವಾಸಿ.
ತಿವಾರಿ ಅವರು ಲಖನೌದ ಬಕ್ಷಿ ಕಾ ತಲಾಬ್ ಅಸೆಂಬ್ಲಿ ಕ್ಷೇತ್ರದ ಶಾಸಕ ಯೋಗೇಶ್ ಶುಕ್ಲಾರಿಗೆ ಸಂಬಂಧಿಸಿದ ಮಾಧ್ಯಮ ತಂಡದ ಸದಸ್ಯರಾಗಿದ್ದರು. ಶುಕ್ಲಾ ಅವರ ಹಜರತ್‌ಗಂಜ್ ನಿವಾಸದಲ್ಲಿ ನೇಣು ಬಿಗಿದುಕೊಂಡು ತಿವಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೌಟುಂಬಿಕ ಕಲಹದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ತಿವಾರಿ ಸಾವಿಗೆ ನಿಖರ ಕಾರಣ ಏನೆಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಸದ್ಯ ಶ್ರೇಷ್ಠ ತಿವಾರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)