ಹಾವಿನ ದ್ವೇಷಕ್ಕೆ ಹಾಸನದ ಯುವಕ ಬಲಿ? ನಾಗರಹಾವಿನ ರಹಸ್ಯ ಬಿಚ್ಚಿಟ್ಟ ಮೃತನ ಮೊಬೈಲ್

Hassan Young Man
Published on

ಹಾಸನ: ಹಾವಿನ ದ್ವೇಷ 12 ವರುಷ ಎನ್ನುವ ಪ್ರಸಿದ್ಧ ಹಾಡೊಂದು ನಾಗರಹಾವು ಚಿತ್ರದಲ್ಲಿದೆ. ನಿಜವಾಗಿಯೂ ಹಾವು ದ್ವೇಷವನ್ನು ಇಟ್ಟುಕೊಂಡಿರುತ್ತದೆ, ತನ್ನ ಇರುವಿಕೆಗೆ ಧಕ್ಕೆ ತಂದವರಿಗೆ ಅಥವಾ ಹಾನಿಗೊಳಿಸಿದರೆ, ನಾಗರಹಾವು ದ್ವೇಷ ಸಾಧಿಸುತ್ತದೆ ಎಂಬ ನಂಬಿಕೆ ತಲೆತಲಾಂತರಗಳಿಂದ ಬಂದಿದೆ. ನಾಗದೋಷದ ಮುಕ್ತಿಗಾಗಿ ದೇವರ ಮೊರೆ ಹೋಗುವುದೂ ಇದಕ್ಕಾಗಿಯೇ.

ಆಧುನಿಕ ವಿಜ್ಞಾನ ಏನೇ ಹೇಳಿದರೂ, ನಂಬಿಕೆಗಳನ್ನು ನಂಬದಿದ್ದರೂ ಕೆಲವೊಮ್ಮೆ ಘಟಿಸುವ ಘಟನೆಗಳು ಯಾರ ಊಹೆಗೂ ನಿಲುಕದ್ದಾಗಿರುತ್ತದೆ. ಅಂಥದ್ದೇ ಒಂದು ಘಟನೆ ಇದೀಗ ಹಾಸನದಲ್ಲಿ ನಡೆದಿದೆ. ಹಾವಿನ ದ್ವೇಷಕ್ಕೆ ಯುವಕ ಬಲಿಯಾಗಿದ್ದಾನೆ ಎಂದು ಹೇಳಲಾಗಿದೆ.

ಹಾವಿಗೆ ತೊಂದರೆ ಕೊಟ್ಟಿದ್ದಕ್ಕೆ ಅದೇ ದ್ವೇಷದಲ್ಲಿ ಹಾವು ಕಚ್ಚಿದೆ ಎನ್ನಲಾದ ಘಟನೆ ಹೊಳೆನರಸೀಪುರ ತಾಲೂಕಿನ ದೇವರಗುಡ್ಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅ. 29 ರ ಸಂಜೆ ಹಾವು ಕಡಿತದಿಂದ ಅಭಿಲಾಷ್​ ಎಂಬ ಮೃತಪಟ್ಟಿದ್ದ. ಇದೀಗ ಆತನ ಮೊಬೈಲ್ ಪರಿಶೀಲನೆ ಮಾಡಿದಾಗ ನಾಗರಹಾವಿಗೆ ಕಾಟ ಕೊಟ್ಟಿರುವ ವಿಡಿಯೋ ಪತ್ತೆಯಾಗಿದೆ.

ಮೃತ ಅಭಿಲಾಷ್​, ತಮ್ಮದೇ ತೋಟದಲ್ಲಿ ನೀರು ಹಾಯಿಸುವ ಪೈಪ್ ಮೂಲಕ ನಾಗರಹಾವಿಗೆ ತೊಂದರೆ ಕೊಟ್ಟಿದ್ದಾನೆ. ಪೈಪ್​ನಿಂದ ಹಾವಿನ ಮುಖಕ್ಕೆ ತಿವಿಯುವಂತೆ ಮಾಡಿ ಹಿಂಸೆ ನೀಡಿದ್ದು, ಅಭಿಲಾಷ್​ನ ವರ್ತನೆ ನೋಡಿ ಹಾವು ಬುಸುಗುಟ್ಟಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಹಾವಿನ ದ್ವೇಷ 12 ವರ್ಷ ಎಂಬಂತೆ ಅದೇ ಹಾವು ಬಂದು ಬಲಿ ಪಡೆದಿದೆ ಎಂಬ ಮಾತು ಗ್ರಾಮದಲ್ಲಿ ಕೇಳಿಬರುತ್ತಿವೆ. ಹಳ್ಳಿ ಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net