ಯಮಸ್ವರೂಪಿಯಾಗಿ ಬಂದೆರಗಿದ ಕ್ಯಾಂಟರ್​; ಗೆಳೆಯನೊಂದಿಗೆ ತೆರಳುತ್ತಿದ್ದವ ಓವರ್​ಟೇಕ್​ಗೆ ಬಲಿ

Canter
Published on

ಬೆಂಗಳೂರು: ಕ್ಯಾಂಟರ್​ವೊಂದರ ಚಾಲಕನೇ ಇಲ್ಲೊಬ್ಬ ಯುವಕನ ಪಾಲಿಗೆ ಯಮನಾಗಿ ಪರಿಣಮಿಸಿದ್ದಾನೆ. ಪರಿಣಾಮವಾಗಿ, ಗೆಳೆಯನೊಂದಿಗೆ ತೆರಳುತ್ತಿದ್ದ ಯುವಕ, ಅತಿವೇಗದ ಅಜಾಗರೂಕತೆಯ ಚಾಲನೆಗೆ ಬಲಿಯಾಗಿದ್ದಾನೆ. ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಸೊಹಿಲ್ ಬಿಸ್ವಾಸ್ (19) ಸಾವಿಗೀಡಾದ ಯುವಕ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕನಕಪುರ ರಸ್ತೆಯ ಯುನಿಟೆಕ್ ಗೇಟ್ ಬಳಿ ಈ ಅಪಘಾತ ಸಂಭವಿಸಿತ್ತು. ಮೂಲತಃ ಪಶ್ಚಿಮಬಂಗಾಳದ ಈತ ಬೆಂಗಳೂರಿನಲ್ಲಿ ಕಾಂಕ್ರೀಟ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ.

ಇಂದು ಬೆಳಗ್ಗೆ ಕೆಲಸಕ್ಕೆಂದು ಗೆಳೆಯನ ಜತೆ ಬೈಕ್​ನಲ್ಲಿ ಹೊರಟಿದ್ದ ಈತ, ಎಲೆಕ್ಟ್ರಾನಿಕ್ ಸಿಟಿಯಿಂದ ಕನಕಪುರರಸ್ತೆ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಕ್ಯಾಂಟರ್ ಬೈಕ್​ಗೆ ಡಿಕ್ಕಿಯಾಗಿದ್ದು, ಸೊಹಿಲ್ ಮೇಲೆಯೇ ಹರಿದುಹೋಗಿದೆ.

ತೊಡೆಗೆ ಗಂಭೀರ ಗಾಯವಾದ ಸೊಹಿಲ್​ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಹರಿಯಾಣ ಮೂಲದ ಕ್ಯಾಂಟರ್​ ಚಾಲಕನನ್ನು ಬಂಧಿಸಿರುವ ಕುಮಾರಸ್ವಾಮಿ ಬಡಾವಣೆ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net