ಪ್ರೀತಿಸಿದ ಮಹಿಳೆಯನ್ನು ಕೊಲೆಗೈದಿದ್ದ ಯುವಕನ ಬಂಧನ

Published on

ಕೆ.ಆರ್.ಪೇಟೆ: ಸಾಮಾಜಿಕ ಜಾಲತಣದಲ್ಲಿ ಪರಿಚಯವಾಗಿದ್ದ ವಿವಾಹಿತ ಮಹಿಳೆಯನ್ನು ಸುತ್ತಾಡಿಸಿ ಯುವಕನೊಬ್ಬ ಕೊಲೆಗೈದು ಮೃತದೇಹವನ್ನು ಬಚ್ಚಿಟ್ಟಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆ ಮಾಡಿದ ಆರೋಪಿಯನ್ನು ಕಿಕ್ಕೇರಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಹಾಸನ ನಗರದ ಹೊಸಕೊಪ್ಪಲು ಬಡಾವಣೆಯ ಸುಂದರೇಶ್ ಎಂಬುವರ ಪತ್ನಿ ಆರ್.ಎಸ್.ಪ್ರೀತಿ(35) ಕೊಲೆಯಾದ ಮಹಿಳೆ. ತಾಲೂಕಿನ ಕರೋಠಿ ಗ್ರಾಮದ ದೇವರಾಜು ಅವರ ಪುತ್ರ ಪುನೀತ್(32) ಪೊಲೀಸರ ವಶದಲ್ಲಿರುವ ಕೊಲೆ ಆರೋಪಿ.

ಸುಂದರೇಶ 16 ವರ್ಷಗಳ ಹಿಂದೆ ಆಲೂರು ತಾಲೂಕಿನ ರಾಜನಹಳ್ಳಿ ಗ್ರಾಮದ ಶಿವೇಗೌಡ ಮಗಳು ಪ್ರೀತಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಪೃಥ್ವಿ, ಪ್ರೀತಂ ಇಬ್ಬರು ಗಂಡು ಮಕ್ಕಳಿದ್ದಾರೆ. ಗಂಡ ಆಟೋ ಓಡಿಸಿಕೊಂಡಿದ್ದರು. ಪತ್ನಿ ನಗರದ ಗೋಕುಲ್‌ದಾಸ್ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುತ್ತಿದ್ದರು. ಕಳೆದ ಜೂ.22 ರಂದು ಕೆಲಸಕ್ಕೆ ರಜೆ ಇದ್ದು, ಸ್ನೇಹಿತೆ ಮಗಳ ಆರತಿಶಾಸ್ತ್ರ ಹೊಳೆನರಸೀಪುರದಲ್ಲಿ ಇದ್ದು, ಹೋಗಿ ಬರುವುದಾಗಿ ಅಂದು ಬೆಳಗ್ಗೆ ಮನೆಯಿಂದ ಪ್ರೀತಿ ಹೋಗಿದ್ದರು.

ಸಂಜೆಯಾದರೂ ಪತ್ನಿ ಬಾರದಿದ್ದರಿಂದ ಗಂಡ ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ಆರೋಪಿ ಕರೆಯನ್ನು ಸ್ವೀಕರಿಸಿ ಮೊಬೈಲ್‌ಅನ್ನು ನಿಮ್ಮ ಹೆಂಡತಿ ಕಾರಿನಲ್ಲಿ ಬಿಟ್ಟು ಹೋಗಿದ್ದಾರೆ. ನಾನು ಪುನಿತ, ಕರೋಠಿ ಗ್ರಾಮದವನು. ಬಾಡಿಗೆ ಕಾರಿನಲ್ಲಿ ಆಕೆಯೊಂದಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ.

ಪತ್ನಿ ಮನೆಗೆ ಬಾರರಿದ್ದರಿಂದ ಜೂ. 23ರಂದು ಮಧ್ಯಾಹ್ನ ಹಾಸನ ಬಡಾವಣೆ ಪೊಲೀಸ್ ಠಾಣೆಗೆ ಪತ್ನಿ ಮಿಸ್ ಆಗಿರುವುದಾಗಿ ಪತಿ ದೂರು ನೀಡಿದ್ದಾರೆ. ಗಂಡ ಆರೋಪಿ ಪುನೀತ್‌ನನ್ನು ಹಾಸನಕ್ಕೆ ಕರೆಸಿಕೊಂಡು ಠಾಣೆಗೆ ಜತೆಯಲ್ಲಿ ಹೋಗಿದ್ದಾರೆ. ಠಾಣೆಯಲ್ಲಿ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಪ್ರೀತಿಯನ್ನು ಕೊಲೆಗೈದು ಶವ ಬಚ್ಚಿಟ್ಟಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ವಾರದ ಹಿಂದೆ ಆರೋಪಿ, ಕೊಲೆಯಾದ ಮಹಿಳೆ ಆರ್.ಎಸ್.ಪ್ರೀತಿ ಇಬ್ಬರ ನಡುವೆ ಫೇಸಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹ ಆಗಿ ಪ್ರೇಮಾಂಕುರವಾಗಿದೆ. ಪುನೀತ್ ತನ್ನ ಸ್ನೇಹಿತನ ಕಾರಿನಲ್ಲಿ ಆಕೆಯನ್ನು ಮೈಸೂರು, ಕೆಆರ್‌ಎಸ್ ಸುತ್ತಾಡಿಕೊಂಡು ಬಂದಿದ್ದಾರೆ. ಹಿಂದಿರುಗಿ ಕೆ.ಆರ್.ಪೇಟೆಯ ಕತ್ತರಘಟ್ಟ ಗ್ರಾಮದಲ್ಲಿ ಪುನೀತ್ ಆಕೆಯನ್ನು ಕೊಲೆಗೈದು ತನ್ನ ಗ್ರಾಮದ ಸ್ವಂತ ಜಮೀನಿನಲ್ಲಿ ನಿರ್ಜನ ಪ್ರದೇಶದಲ್ಲಿ ಶವವನ್ನು ತೆಂಗಿನ ಗರಿಯಲ್ಲಿ ಮುಚ್ಚಿಟ್ಟಿದ್ದಾನೆ.

ಹಾಸನ ಪೊಲೀಸರು ನಾಪತ್ತೆ ಪ್ರಕರಣ ವಿಚಾರಣೆ ಸಮಯದಲ್ಲಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆಕೆಯನ್ನು ಕೊಲೆಗೈದಿರುವುದೇಕೆ? ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ. ಆರೋಪಿ ಪೊಲೀಸರ ವಶದಲ್ಲಿದ್ದು ತನಿಖೆಗೊಳಪಟ್ಟಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net