ಪಾರ್ಕ್​ನಲ್ಲಿ ಯುವಕ-ಯುವತಿ ಜೊತೆಯಲ್ಲಿ ಕುಳಿತಿದ್ದಕ್ಕೆ ಹಣ ವಸೂಲಿ ಪ್ರಕರಣ: ಹೋಂ ಗಾರ್ಡ್​ ಅರೆಸ್ಟ್​

Police
Published on

ಬೆಂಗಳೂರು: ಪಾರ್ಕಿನಲ್ಲಿ ಯುವಕ ಯುವತಿ ಬಳಿ ಸಾವಿರ ರೂಪಾಯಿ ವಸೂಲಿ ‌ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಬಂಧಿತ ಆರೋಪಿ. ಈತ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಬಿಬಿಎಂಪಿಯಿಂದ ಕುಂದಲಹಳ್ಳಿ ಕೆರೆ ಭದ್ರತೆಗೆ ನಿಯೋಜನೆ ಆಗಿದ್ದ. ಇಂದು ಬೆಳಗ್ಗೆ ಸಂತ್ರಸ್ತ ಹುಡುಗ ಮತ್ತು ಹುಡುಗಿ ವಾಯುವಿಹಾರಕ್ಕೆಂದು ಹೊರಟ್ಟಿದ್ದರು. ಈ ವೇಳೆ ದಿಢೀರ್​ ಎಂಟ್ರಿ ಕೊಟ್ಟ ಮುಂಜನಾಥ್​ ಬೆದರಿಕೆ ಹಾಕಿ ಆ ಜೋಡಿಯಿಂದ 1000 ರೂ. ವಸೂಲಿ ಮಾಡಿದ್ದರು.

ಈ ಘಟನೆಯಿಂದ ಮನನೊಂದ ಯುವತಿ ಟ್ವಿಟರ್​ ಮೂಲಕ ಬೆಂಗಳೂರು ನಗರದ ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದಾಳು. ಹಣ ವಸೂಲಿ ಮಾಡಿದ ಸಿಬ್ಬಂದಿಯ ಬೈಕ್​ ಫೋಟೋ ಸಮೇತ ಯುವತಿ ದೂರು ನೀಡಿದ್ದಳು. ನಾವೇನು ತಪ್ಪು ಮಾಡದಿದ್ದರೂ ನಮ್ಮ ಮೇಲೆ ನೈತಿಕ ಪೊಲೀಸ್​ ಗಿರಿ ತೋರಲಾಗಿದೆ ಎಂದು ಆರೋಪ ಮಾಡಿದ್ದಳು.

ಸಿಬ್ಬಂದಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಯಾವ ಕಾರಣಕ್ಕಾಗಿ ಅವರಿಂದ ಪೊಲೀಸ್​ ಸಿಬ್ಬಂದಿ ಹಣ ವಸೂಲಿ ಮಾಡಿದರು. ಅಲ್ಲಿ ಏನು ತಪ್ಪು ನಡೆದಿದೆ. ಇಂತಹದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಪೊಲೀಸ್​ ಆಯುಕ್ತರು ಆ ಪೊಲೀಸ್​ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸ್​ ಇಲಾಖೆ ಮತ್ತಷ್ಟು ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದು ನೆಟ್ಟಿಗರು ಆಗ್ರಹಿಸಿದ್ದರು.

ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಬೆಂಗಳೂರು ಪೊಲೀಸರ ತ್ವರಿತ ಕ್ರಮಕ್ಕೆ ನೆಟ್ಟಿಗರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆರಂಭದಲ್ಲಿ ಪೊಲೀಸ್​ ಸಿಬ್ಬಂದಿ ಎಂದು ಭಾವಿಸಿದ್ದರು. ಆದರೆ, ಬಂಧಿತ ಆರೋಪಿ ಪೊಲೀಸ್​ ಕಾನ್ಸ್​ಟೇಬಲ್​ ಅಲ್ಲ, ಆತ ಓರ್ವ ಹೋಂ ಗಾರ್ಡ್​ ಎಂದು ಎಚ್​ಎಎಲ್​ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.​ (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net