ಬೆಂಗಳೂರಿನಲ್ಲಿ ಪೊಲೀಸಪ್ಪನಿಂದ ದಾದಾಗಿರಿ: ಹುಡುಗ-ಹುಡುಗಿ ಜೊತೆಯಲ್ಲಿ ಕುಳಿತಿದ್ದಕ್ಕೆ 1000 ರೂ. ವಸೂಲಿ!

BNG Police
Published on

ಬೆಂಗಳೂರು: ಹುಡುಗ-ಹುಡುಗಿ ಜೊತೆಯಲ್ಲಿ ಕುಳಿತುಕೊಂಡರು ಅಂತಾ ಪೊಲೀಸ್​ ಮಹಾಶಯನೊಬ್ಬ ಅವರಿಂದ 1000 ರೂ. ವಸೂಲಿ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ಈ ರೀತಿಯ ದಾದಾಗಿರಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸಂತ್ರಸ್ತ ಹುಡುಗ ಮತ್ತು ಹುಡುಗಿ ವಾಯುವಿಹಾರಕ್ಕೆಂದು ಹೊರಟ್ಟಿದ್ದರು. ಈ ವೇಳೆ ದಿಢೀರ್​ ಎಂಟ್ರಿ ಕೊಟ್ಟ ಪೊಲೀಸಪ್ಪ ಬೆದರಿಕೆ ಹಾಕಿ ಆ ಜೋಡಿಯಿಂದ 1000 ರೂ. ವಸೂಲಿ ಮಾಡಿದ್ದಾರೆ. ನಗರದ ಕುಂದಲಹಳ್ಳಿ ಪಾರ್ಕ್​ ಬಳಿ ಈ ಘಟನೆ ನಡೆದಿದೆ.

ಈ ಘಟನೆಯಿಂದ ಮನನೊಂದ ಯುವತಿ ಟ್ವಿಟರ್​ ಮೂಲಕ ಬೆಂಗಳೂರು ನಗರದ ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದಾಳೆ. ಹಣ ವಸೂಲಿ ಮಾಡಿದ ಪೊಲೀಸಪ್ಪನ ಬೈಕ್​ ಸಮೇತ ಯುವತಿ ದೂರು ನೀಡಿದ್ದಾಳೆ. ನಾವೇನು ತಪ್ಪು ಮಾಡದಿದ್ದರೂ ನಮ್ಮ ಮೇಲೆ ನೈತಿಕ ಪೊಲೀಸ್​ ಗಿರಿ ತೋರಲಾಗಿದೆ.

ಇದೀಗ ಪೊಲೀಸಪ್ಪ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಯಾವ ಕಾರಣಕ್ಕಾಗಿ ಅವರಿಂದ ಪೊಲೀಸ್​ ಸಿಬ್ಬಂದಿ ಹಣ ವಸೂಲಿ ಮಾಡಿದರು. ಅಲ್ಲಿ ಏನು ತಪ್ಪು ನಡೆದಿದೆ. ಇಂತಹದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಪೊಲೀಸ್​ ಆಯುಕ್ತರು ಆ ಪೊಲೀಸ್​ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸ್​ ಇಲಾಖೆ ಮತ್ತಷ್ಟು ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net