

ಲಖನೌ: ನಮ್ಮ ಬಳಿ ಗಾಡಿ ಇಲ್ಲದಿದ್ದಾಗ ಒಂದು ಕಡೆಯಿಂದ ಮತ್ತೊಂದೆಡೆಗೆ ಹೋಗಬೇಕಾದರೆ ಆಟೋ (Auto) ಅಥವಾ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸುತ್ತೇವೆ. ಕೆಲವೊಮ್ಮೆ ದುಬಾರಿ ಎನಿಸಿದರು ಅನಿವಾರ್ಯ ಕಾರಣಗಳಿಂದ ನಾವು ಆಟೋವನ್ನು ಹತ್ತುತ್ತೇವೆ. ಆದರೆ, ಇಲ್ಲೊಬ್ಬ ಯುವತಿ ಆಟೋದಲ್ಲಿ ಪ್ರಯಾಣಿಸಿದ ಬಳಿಕ ಹಣವನ್ನು ನೀಡದೆ ಚಾಲಕನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವತಿ ಅವಾಚ್ಯ ಶಬ್ದಗಳಿಂದ ಚಾಲಕನನ್ನು ನಿಂದಿಸುತ್ತ ಆತನನ್ನು ಥಳಿಸುತ್ತಿದ್ದು, ಆಟೋ ಚಾಲಕನ (Auto Driver) ತನ್ನದಲ್ಲದ ತಪ್ಪಿಗೆ ಕ್ಷಮೆಯಾಚಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮಿರ್ಜಾಪುರದ ಕತ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯುವತಿ ಆಟೋದಲ್ಲಿ (Auto) ಸುತ್ತಾಡಿದ್ದಾಳೆ. ಚಾಲಕ ಬಾಡಿಗೆ ಹಣ ಕೊಡುವಂತೆ ಕೇಳಿದಾಗ ಆಕೆ ಚಾಲಕನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಬಳಿಕ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾಳ.
ಮೊದಲಿಗೆ ಆಟೋ ಚಾಲಕ (Auto Driver) ದೂರು ನೀಡಲು ಹೋದಾಗ ಕತ್ರಾ ಠಾಣೆಯ ಅಧಿಕಾರಿಗಳು ದೂರು ಪಡೆದಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿಡಿಯೋ ವೈರಲ್ ಆದ ಬಳಿಕ ಅಧಿಕಾರಿಗಳು ದೂರು ಸ್ವೀಕರಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.