ಯುವ ದಂತ ವೈದ್ಯೆಗೆ ಮುಳುವಾಯ್ತು ಲಿವ್ ಇನ್ ರಿಲೇಷನ್: ಕ್ಲಿನಿಕ್​ ಲ್ಯಾಬ್​ನಲ್ಲಿ ನಡೆಯಿತು ದುರಂತ! ​

Live in Relation
Published on

ಎರ್ನಾಕುಲಂ: ಪ್ರಿಯಕರನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವ ದಂತ ವೈದ್ಯೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಮುವಟ್ಟುಪುಜದಲ್ಲಿ ಭಾನುವಾರ ನಡೆದಿದೆ.

ಡಾ. ಸೋನಾ (30) ಮೃತ ವೈದ್ಯೆ. ತ್ರಿಸ್ಸೂರ್​ನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೆಪ್ಟೆಂಬರ್​ 28ರಂದು ಪ್ರಿಯಕರ ಮಹೇಶ್​ ಎಂಬಾತನಿಂದ ಸೋನಾ ಚಾಕು ಇರಿತಕ್ಕೆ ಒಳಗಾಗಿದ್ದರು. ಆರೋಪಿ ಮಹೇಶ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ತಲೆ ಮರೆಸಿಕೊಂಡಿದ್ದಾನೆ.

ಸೋನಾ ಒಂದೂವರೆ ವರ್ಷದಿಂದ ತ್ರಿಸ್ಸೂರ್​ನ ಒಲ್ಲೂರು ಬಳಿಯ ಕುಟ್ಟನೆಲ್ಲೂರಿನಲ್ಲಿ ಡೆಂಟಲ್​ ಕ್ಲಿನಿಕ್​ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಹೇಶ್​ರೊಂದಿಗೆ ಲಿವ್ ಇನ್ ರಿಲೇಷನ್​ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಂದಹಾಗೆ ಮಹೇಶ್​ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ.

ಹೀಗಿರುವಾಗ ಹಣಕಾಸು ವಿಚಾರವಾಗಿ ಇತ್ತೀಚೆಗಷ್ಟೇ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಇದರ ನಡುವೆ ಸೋನಾ ಕಳೆದ ವಾರ ಮಹೇಶ್​ ವಿರುದ್ಧ ಒಲ್ಲೂರ್​ ಪೊಲೀಸ್​ ಠಾಣೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ದೂರು ನೀಡಿದ್ದರು. ಕ್ಲಿನಿಕ್​ನಿಂದ ಬರುತ್ತಿದ್ದ ಆದಾಯವನ್ನು ಅಕ್ರಮವಾಗಿ ತೆಗೆದುಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ದೂರಿನ ಅನ್ವಯ ಪೊಲೀಸರು ಇಬ್ಬರಿಗೂ ಸಮನ್ಸ್​ ನೀಡಿದ್ದರು. ಆದರೆ, ಮಹೇಶ್​ ಪೊಲೀಸರ ಎದುರು ಹಾಜರಾಗಿರಲಿಲ್ಲ. ಹೀಗಿರುವಾಗ ಸೆ. 28ರಂದು ಕ್ಲೀನಿಕ್​ನಲ್ಲಿ ಸೋನಾ ತಂದೆ ಜೋಸ್​ ಸಮ್ಮುಖದಲ್ಲಿ ಸಂಧಾನ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಹೇಶ್​, ಸೋನಾರನ್ನು ಬಲವಂತವಾಗಿ ಕ್ಲಿನಿಕ್​ನ ಲ್ಯಾಬ್​ ಒಳಗಡೆ ಎಳೆದುಕೊಂಡು ಹೋಗಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆಯ ಹೊಟ್ಟೆಗೆ ಗಂಭೀರ ಗಾಯಗಳಾಗಿತ್ತು. ಬಳಿಕ ಶರಣಾಗಲು ಪೊಲೀಸ್​ ಠಾಣೆಗೆ ಹೋಗುತ್ತೇನೆಂದು ಹೇಳಿ ಮಹೇಶ್​ ಪರಾರಿಯಾಗಿದ್ದಾನೆ.

ಇನ್ನು ಸೋನಾಗೆ ಮೊದಲೇ ಮದುವೆಯಾಗಿ ಪತಿಯಿಂದ ಬೇರೆಯಾಗಿದ್ದಳು. ಒಂದು ಮಗುವೂ ಸಹ ಇದೆ. ಇನ್ನು ಪ್ರಿಯಕರ ಮಹೇಶ್​ ಅವಿವಾಹಿತನಾಗಿದ್ದು, ಪವರಟ್ಟಿ ಮೂಲದವನು. ಸದ್ಯ ಸೋನಾ ಜೀವನ ದುರಂತ ಅಂತ್ಯ ಕಂಡಿದ್ದು, ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಯ ಬಳಿಕ ತವರಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net