

Corruption: ಅಶ್ವತ್ಥ್ ನಾರಾಯಣ ನೀನು, ನಿನ್ನ ಪಕ್ಷ ಭ್ರಷ್ಟಾಚಾರದ ಪಿತಾಮಹರು. ರಾಮನಗರದಲ್ಲಿ ಒಂದೂ ಕ್ಷೇತ್ರ ಗೆಲ್ಲಲಾಗದವ, ಅಲ್ಪಸಂಖ್ಯಾತ ನಾಯಕನನ್ನು ಅಸಮರ್ಥ ಎನ್ನುತ್ತೀಯಾ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹರಿಹಾಯ್ದರು.
ವಿಧಾನಸಭೆ ಕಲಾಪದಲ್ಲಿ ರಸಗೊಬ್ಬರ ಕೊರತೆ ವಿಚಾರವಾಗಿ ನಡೆದ ಚರ್ಚೆ ವೇಳೆ ಮಾತನಾಡಿದ ಡಿಕೆಶಿ ಮತ್ತು ಅಶ್ವತ್ ನಾರಾಯಣ ನಡುವೆ ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಚರ್ಚೆ ವೇಳೆ ಮಾತನಾಡುವಾಗ ತಪ್ಪು ಅಂಕಿ ಅಂಶಗಳನ್ನು ನೀಡಿದ ಕಾರಣ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸರಿ ಅಂಕಿ-ಅಂಶಗಳ ಸ್ಪಷ್ಟನೆ ನೀಡಲು ಮುಂದಾದರು. ಈ ವೇಳೆ ಅಶ್ವತ್ ನಾರಾಯಣ ಅವರು ಮಧ್ಯಪ್ರವೇಶಿಸಿ ವಾಗ್ವಾದ ಆರಂಭಿಸಿದರು. ಆಗ ಸಚಿವ ಕೆ.ಜೆ ಜಾರ್ಜ್ ಅವರು, 'ಸುಳ್ಳು ಹೇಳಬೇಡಿ' ಎಂದು ಹೇಳಿದಾಗ, ಅಶ್ವತ್ಥ್ ನಾರಾಯಣ್ ಅವರು, 'ಸ್ಮಾರ್ಟ್ ಮೀಟರ್ ವಿಚಾರವಾಗಿ ಮಾತನಾಡಲು ನಿಮಗೆ ಧಮ್, ಯೋಗ್ಯತೆ ಇಲ್ಲ, ನೀವು ಅಸಮರ್ಥ' ಎಂದು ಟೀಕೆ ಮಾಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, “ಅಸಮರ್ಥರು ಅವರಲ್ಲ. ನೀವು ಅಸಮರ್ಥರು. ರಾಜ್ಯದ ಜನ ಮತ ನೀಡಿ ಅಧಿಕಾರ ನಡೆಸಲು ಅವಕಾಶ ನೀಡಿರುವ ಜಾರ್ಜ್ ಅವರು ಅಸಮರ್ಥರಲ್ಲ, ನೀವು ಅಸಮರ್ಥರಾಗಿರುವ ಕಾರಣ ನಿಮ್ಮ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ” ಎಂದು ತಿರುಗೇಟು ನೀಡಿದರು.
ಈ ವೇಳೆ ಅಶ್ವತ್ಥ್ ನಾರಾಯಣ ಅವರು “ಈ ಸರ್ಕಾರ ಅಸಮರ್ಥ, ಜನವಿರೋಧಿ, ಭ್ರಷ್ಟಾಚಾರ ಸರ್ಕಾರ” ಎಂದರು.
“ನೀನು, ನಿನ್ನ ಪಕ್ಷ ಭ್ರಷ್ಟಾಚಾರದ ಪಿತಾಮಹರು. ನಿಮ್ಮ ಭ್ರಷ್ಟಾಚಾರದಿಂದಲೇ ನಾವು 135 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ನೀನು ರಾಮನಗರಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಬಂದಿದ್ಯಲ್ಲ.., ಆಗ ನಿನಗೆ ಡೆಪಾಸಿಟ್ ಕೂಡ ಬರಲಿಲ್ಲ. ರಾಮನಗರದಲ್ಲಿ 1 ಸೀಟ್ ಕೂಡ ಬರಲಿಲ್ಲ. ನೀನು ನಿಜವಾದ ಅಸಮರ್ಥ” ಎಂದು ಕೆಂಡಾ- ಮಂಡಲರಾದರು.