'ಇದು ಹೀಗೆ ಮುಂದುವರಿದ್ರೆ ಕೆಲಸ ಕಳೆದುಕೊಳ್ಳುತ್ತೀರಿ': ಪ್ರತಿಭಟನಾ ನಿರತ ಆಶಾ ಕಾರ್ಯಕರ್ತರಿಗೆ ಬೆದರಿಕೆ

ವಿಜಯವಾಣಿ - 2025-02-27T164545.100 (1)
Published on

ಕೋಝಿಕೋಡ್: ಕೇರಳ ಸಚಿವಾಲಯದ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತರಿಗೆ ಕಾರ್ಮಿಕ ಸಂಘದ ನಾಯಕಿಯೊಬ್ಬರು ಬೆದರಿಕೆಯೊಡ್ಡಿದ್ದಾರೆ. ಕೆಲಸಕ್ಕೆ ಮರಳದೆ ಮುಷ್ಕರ ಮುಂದುವರಿಸಿದರೆ ನಿಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿಕೆ ರವಾನಿಸಿದ್ದಾರೆ.

ಆದಾಯ ತೆರಿಗೆ ಕಚೇರಿಯ ಮುಂದೆ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪಿ. ಪ್ರೇಮಾ, "ಸಚಿವಾಲಯದ ಎದುರು ಪ್ರತಿಭಟನೆ ನ್ಯಾಯಸಮ್ಮತವಲ್ಲ. ಆಶಾ ಕಾರ್ಯಕರ್ತರನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ನೌಕರರಾಗಿ ಗುರುತಿಸದಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಅವರು ದೂಷಿಸಿದ್ದಾರೆ. ಯುಡಿಎಫ್ ಸರ್ಕಾರ ಈ ಹಿಂದೆ ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಕಡೆಗಣಿಸಿತ್ತು, ಆದರೆ ವಿ.ಎಸ್. ಅಚ್ಯುತಾನಂದನ್ ನೇತೃತ್ವದ ಹಿಂದಿನ ಎಲ್‌ಡಿಎಫ್ ಸರ್ಕಾರ ಅವರ ಪರವಾಗಿ ಪೂರ್ವಭಾವಿ ನಿಲುವನ್ನು ತೆಗೆದುಕೊಂಡಿತ್ತು" ಎಂದು ಹೇಳಿದರು.

“ಸಿಐಟಿಯು ಅನೇಕ ಬೇಡಿಕೆಗಳನ್ನು ಮುಂದಿಟ್ಟು ಹಲವಾರು ಪ್ರತಿಭಟನೆಗಳನ್ನು ಆಯೋಜಿಸಿದೆ. ಆದಾಗ್ಯೂ, ಅವರು ಎಂದಿಗೂ ಆಡಳಿತ ಅಧಿಕಾರಿಗಳ ವಿರುದ್ಧ ನಿಂದನೀಯ ಘೋಷಣೆಗಳನ್ನು ಬಳಸಲಿಲ್ಲ. ಈಗಿನ ಮುಷ್ಕರ ಸರ್ಕಾರವನ್ನು ಅಸ್ಥಿರಗೊಳಿಸುವ ಆಂದೋಲನವಾಗಿ ಮಾರ್ಪಡುತ್ತಿದೆ. ಮುಷ್ಕರದ ಹಿಂದಿರುವವರು ಪ್ರತಿಭಟನೆಯ ನೆಪದಲ್ಲಿ ಸರ್ಕಾರವನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ" ಎಂದು ಪ್ರೇಮಾ ಗುಡುಗಿದ್ದಾರೆ.

"ಕೇಂದ್ರ ಸರ್ಕಾರವು ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಲು ಸಿದ್ಧವಿಲ್ಲ. ಆದರೆ, ಕೇರಳ ಸರ್ಕಾರವು ಒಂದು ವರ್ಷದ ಪ್ರೋತ್ಸಾಹ ಧನವನ್ನು ಪಾವತಿಸಿದೆ. ಸಚಿವಾಲಯದ ಪ್ರತಿಭಟನೆ ನಡೆಸುತ್ತಿರುವ ವಿಧಾನವನ್ನು ನಿಜಕ್ಕೂ ಸರಿಯಲ್ಲ. ಅಧಿಕಾರಿಗಳು ಸವಲತ್ತುಗಳನ್ನು ನೀಡಲು ನಿರಾಕರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರೆ ಖಂಡಿತ ಆ ಮುಷ್ಕರಕ್ಕೆ ನಾನೂ ಕೈಜೋಡಿಸಲು ಸಿದ್ಧ" ಎಂದು ಹೇಳಿದರು.

ಕೋಝಿಕ್ಕೋಡ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕರ ಒಕ್ಕೂಟ (ಸಿಐಟಿಯು) ಆಯೋಜಿಸಿತು. ಆಶಾ ಕಾರ್ಯಕರ್ತರನ್ನು ಖಾಯಂ ನೌಕರರೆಂದು ಗುರುತಿಸುವುದು, ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಬಾಕಿ ಇತ್ಯರ್ಥ, ನಿವೃತ್ತಿ ಸೌಲಭ್ಯಗಳು, ನಿವೃತ್ತಿ ವಯಸ್ಸನ್ನು 65ಕ್ಕೆ ಹೆಚ್ಚಿಸುವುದು, ಇಎಸ್‌ಐ ಮತ್ತು ಪಿಎಫ್ ವ್ಯಾಪ್ತಿ ಮತ್ತು ಸಾಮಾಜಿಕ ಭದ್ರತಾ ಕ್ರಮಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಯಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net