

ಬೆಂಗಳೂರು : ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೇ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ. ಮುಡಾ ಹಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತವೇ ಗತಿ ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಕರ್ಮ ಹಿಟ್ ಬ್ಯಾಕ್ ಎಂದರೇ ಇದೇ ಅಲ್ಲವೆ ಸಿದ್ದರಾಮಯ್ಯನವರೇ? ಎಂದು ಕೆಣಕಿರುವ ಅವರು, ರಾಜ್ಯದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಪ್ರವೇಶಕ್ಕೆ ಇದ್ದ ಮುಕ್ತ ಅವಕಾಶವನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ.
ಸಿಬಿಐಗೆ ನಿರ್ಭಂದ ಹಾಕಿರುವುದು ಎಂದರೆ ಮುಖ್ಯಮಂತ್ರಿ ಮುಡಾ ಅಕ್ರಮ ಒಪ್ಪಿಕೊಂಡಂತೆ ಆಗಿದೆ. ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇಉಘೇ ಎನ್ನಲೇಬೇಕು ಎಂದು ಲೇವಡಿ ಮಾಡಿದ್ದಾರೆ.
ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು.ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ಸಿಬಿಐ ರಾಜ್ಯ ಪ್ರವೇಶಕ್ಕೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. ‘ಸಿದ್ದಾಪರಾದ’ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ ಎಂದು ಟಾಂಗ್ ನೀಡಿದ್ದಾರೆ.
ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು. ನಿಮಗೂ ಭಯವಿದೆ! ಅದೇ ಈ ನೆಲದ ಕಾನೂನಿನ ಶಕ್ತಿ. ಏನಂತೀರಿ ಸಿದ್ಧರಾಮಯ್ಯನವರೇ? ಎಂದು ಕುಮಾರಸ್ವಾಮಿ ಸಿಎಂ ಕಾಲೆದಿದ್ದಾರೆ.