ರಾಹುಲ್ ಪ್ರಧಾನಿಯಾಗ್ತಾರೆ ಅನ್ನೋದು ನಿಮಗೆ ಗೊತ್ತಾ? ಅರ್ಜಿದಾರನನ್ನೇ ಪ್ರಶ್ನಿಸಿದ ಬಾಂಬೆ ಹೈಕೋರ್ಟ್​! Rahul Gandhi

Rahul Gandhi
Published on

Rahul Gandhi : ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಕುರಿತು ಓದಿ, ಜ್ಞಾನೋದಯ ಮಾಡಿಕೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ( ಜುಲೈ 15 ) ತಿರಸ್ಕರಿಸಿದೆ.

ಅಭಿನವ ಭಾರತ್ ಕಾಂಗ್ರೆಸ್ ಎಂಬ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿರುವ ಅರ್ಜಿದಾರ ಪಂಕಜ್ ಕುಮುದ್ ಚಂದ್ರ ಫಡ್ನಿಸ್, ಸಾವರ್ಕರ್ ಬಗ್ಗೆ ರಾಹುಲ್ ಅವರ "ಅಪಕ್ವ ಮತ್ತು ಬೇಜವಾಬ್ದಾರಿ" ಹೇಳಿಕೆಗಳು ಬಹಳಷ್ಟು ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ನಾನು ಸಾವರ್ಕರ್ ಬಗ್ಗೆ ಸಂಶೋಧನೆ ಮಾಡಿದ್ದೇನೆ ಎಂದು ವಾದಿಸಿದರು.

ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಸಂದೀಪ್ ಮಾರ್ನೆ ಅವರ ದ್ವೀಸದಸ್ಯ ಪೀಠವು, ನಿಮ್ಮ ಅರ್ಜಿಯಲ್ಲಿ ಸಾವರ್ಕರ್ ಕುರಿತು ವೈಯಕ್ತಿಕವಾಗಿ ಅಧ್ಯಯನ ಮಾಡಿ ಓದುವಂತೆ ನಿರ್ದೇಶಿಸಬೇಕೆಂಬುದು ಕೇಳಿಕೊಂಡಿದ್ದೀರಿ. ಆದರೆ, ನ್ಯಾಯಾಲಯವು ನಿಮ್ಮ ಅರ್ಜಿಯನ್ನು ಓದುವಂತೆ ಹೇಗೆ ಅವರನ್ನು ಒತ್ತಾಯಿಸಬಹುದು? ಎಂದು ಮರುಪ್ರಶ್ನೆ ಹಾಕಿತು. ಇದಕ್ಕೆ ಅರ್ಜಿದಾರರು, ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಗೊಂದಲ ಸೃಷ್ಟಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಪ್ರಧಾನಿಯಾದರೆ ಅವಾಂತರ ಸೃಷ್ಠಿಸುತ್ತಾರೆ ಎಂದು ಉತ್ತರಿಸಿದರು.

ಇದಕ್ಕೆ ಪ್ರತಿಯಾಗಿ ನ್ಯಾಯಮೂರ್ತಿಗಳು, ರಾಹುಲ್​ ಅವರು ಪ್ರಧಾನಿಯಾಗುತ್ತಾರೆಂಬುದು ನಮಗೆ ಗೊತ್ತಿಲ್ಲ, ನಿಮಗೆ ಗೊತ್ತಾ? ಎಂದು ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಅರ್ಜಿದಾರರಿಗೆ ಕಾನೂನಿನಲ್ಲಿ ಅವಕಾಶವಿದೆ ಎಂದು ನ್ಯಾಯಪೀಠ ತಿಳಿಸಿತು.

ವೀರ್ ಸಾವರ್ಕರ್ ಅವರ ಸೋದರಳಿಯ ಈಗಾಗಲೇ ಪುಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದು, ಆ ವಿಷಯದ ಕುರಿತು ಈಗಾಗಲೇ ವಿಚಾರಣೆ ನಡೆಯುತ್ತಿದೆ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿದರು.

ರಾಹುಲ್ ಗಾಂಧಿ 2022ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಸಾವರ್ಕರ್ ಅವರನ್ನು ವಸಾಹತುಶಾಹಿ ಸರ್ಕಾರದಿಂದ ಪಿಂಚಣಿ ಪಡೆದ "ಬ್ರಿಟಿಷ್ ಸೇವಕ" ಎಂದು ಟೀಕಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net