

ರಿಪ್ಪನ್‌ಪೇಟೆ: ಸಾಧಿಸುವ ಶಕ್ತಿ ನಿಮ್ಮಲ್ಲೇ ಇರುವಾಗ ಅದನ್ನು ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಹುಡುಕುವುದು ತರವಲ್ಲ ಎಂದು ಉಪನ್ಯಾಸಕ ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್, ರೆಡ್ ರಿಬ್ಬನ್, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶಾಲಾ ಕಾಲೇಜುಗಳ ಪರೀಕ್ಷೆಯಲ್ಲಿ ಫೇಲಾಗುವುದು ಅವಮಾನವಲ್ಲ. ಆದರೆ ಜೀವನದಲ್ಲಿ ಫೇಲಾಗಬಾರದು. ರವೀಂದ್ರನಾಥ ಠ್ಯಾಗೋರ್, ಪೂರ್ಣಚಂದ್ರ ತೇಜಸ್ವಿ, ಆರ್.ಕೆ.ನಾರಾಯಣ್, ಮಾರ್ಕೋನಿ ಅವರಂತಹ ಜ್ಞಾನಿಗಳೇ ಶಾಲಾ ಪರೀಕ್ಷೆಯಲ್ಲಿ ಫೇಲಾಗಿದ್ದವರು. ಆದರೆ ಅವರ ಛಲ ಅವರನ್ನು ದಿಗ್ಗಜರನ್ನಾಗಿಸಿತು ಎಂದರು.
ಫೇಲಾದರೆ ಜೀವನ ಮುಗಿದಂತಲ್ಲ. ಓದಲು ಆರಂಭಿಸಿ ಅದು ನಿಮ್ಮ ಬದುಕು ಬದಲಾಯಿಸುತ್ತದೆ. ನಿಮಗೆ ಮಾದರಿ ಆಗಬೇಕಾದವರು ಚಿತ್ರತಾರೆಯರಲ್ಲ. ಸ್ವಾಮಿ ವಿವೇಕಾನಂದ ಅವರಂತಹ ಮಹನೀಯರು. ಸಶಕ್ತ ನೂರು ಯುವಕರನ್ನು ಕೊಡಿ ಈ ರಾಷ್ಟ್ರದ ಚಿತ್ರಣವನ್ನು ಬದಲಾಯಿಸುತ್ತೇನೆ ಎಂದು ಘೋಷಿಸಿದ್ದರು. ಪ್ರಸ್ತುತ ಅಂತಹ ನೂರು ಜನ ಯುವಕರು ಸಿಗುವುದು ಕಷ್ಟ. ಯುವಕರು ಹಾಳಾಗಲು ಪೂರಕ ವಾತಾವರಣ ನಿರ್ಮಾಣವಾಗಿದೆ. ಮಾದಕ ವಸ್ತುಗಳು ನಿಮ್ಮ ಬದುಕನ್ನು ಬರಡಾಗಿಸುತ್ತವೆ. ಸಮಯವನ್ನು ವ್ಯರ್ಥಮಾಡದೆ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಈಗಿನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ವಿಪುಲ ಅವಕಾಶಗಳಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ. ಆದರೆ ಓದಿ ಮುಂದೆ ಬರುವುದು ನಿಮ್ಮ ಜವಾಬ್ದಾರಿ. ನಿಮ್ಮ ಅಭ್ಯಾಸ ಹೇಗಿರಬೇಕೆಂದರೆ ಮುಂದೊಂದು ದಿನ ನಾನೇ ನಿಮಗೆ ಸಲ್ಯೂಟ್ ಹೊಡೆಯುವಷ್ಟು ಎತ್ತರಕ್ಕೆ ಬೆಳೆಯುವಂತಾಗಬೇಕು. ಆಗ ನನಗೆ ಸಂತೋಷವಾಗುತ್ತದೆ ಎಂದರು.
ಕ್ರೀಡೆ, ಸಾಂಸ್ಕೃತಿಕ ಮತ್ತಿತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ, ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಾಚಾರ್ಯ ಎಚ್.ಎಸ್.ವಿರೂಪಾಕ್ಷಪ್ಪ, ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿ ಗೌಡ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಸಿಡಿಸಿ ಸದಸ್ಯರಾದ ಮಂಜುನಾಥ ಕಾಮತ್, ಹರ್ಷ, ರೋಡ್ರಿಗಸ್, ಮುಖಂಡರಾದ ಚಿದಂಬರ, ಸುಬ್ರಹ್ಮಣ್ಯ, ಇಒ ನರೇಂದ್ರಕುಮಾರ್ ಇತರಿದ್ದರು.