ಆಗಾಗ ಮುಖ್ಯಮಂತ್ರಿಗಳಿಗೆ ಪಾಠ ಮಾಡಲು ನೀವೇನು ಹೆಡ್​ಮಾಸ್ಟರ್​ ಅಲ್ಲ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಟಾಂಗ್

Modi vs Siddaramaiah vvani
Published on

ಬೆಂಗಳೂರು: ಕೋವಿಡ್ ಬಿಕ್ಕಟ್ಟು ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇಲಿಂದ ಮೇಲೆ ಸಭೆಗಳನ್ನು ಆಯೋಜಿಸಿ ಪರಾಮರ್ಶೆ ನಡೆಸುತ್ತಿದ್ದಾರೆ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್​ ಮಾಡಿ ಪ್ರಧಾನಿ ಮೋದಿ ಅವರ ಕಾಲೆಳದಿದ್ದಾರೆ.

ಪ್ರಧಾನಿ‌ ಮೋದಿ ಅವರೇ, ಪರದೆಯಲ್ಲಿ ಮತ್ತೆ ಮತ್ತೆ ಮುಖ ತೋರಿಸಿದರೆ ಕೊರೊನಾ ವೈರಸ್ ಓಡಿಹೋಗುವುದಿಲ್ಲ,‌ ಆಗಾಗ‌ ಮುಖ್ಯಮಂತ್ರಿಗಳಿಗೆ ಪಾಠ‌ಮಾಡಲು ನೀವು ಹೆಡ್‌ಮಾಸ್ಟರ್ ಕೂಡಾ ಅಲ್ಲ. ಮೊದಲು ರಾಜ್ಯಗಳ ಬೇಡಿಕೆಗಳನ್ನು ಈಡೇರಿಸಿ ಕೋವಿಡ್ ನಿಯಂತ್ರಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಪ್ರತಿಯೊಂದು ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ ಸಾಯುತ್ತಿದ್ದಾರೆ. ಆಮ್ಲಜನಕ ಪೂರೈಕೆ ಮಾಡಿ‌ ಎಂದರೆ ಅಕ್ರಮ ದಾಸ್ತಾನು‌ ಮಾಡಿದವರ ಮೇಲೆ ಕ್ರಮಕೈಗೊಳ್ಳಿ ಎಂದು ಕರೆ ನೀಡುತ್ತೀರಿ. ನೀವೇನು ರಾಜ್ಯಗಳ‌ ಅನುಮತಿ ಪಡೆದು ಆಮ್ಲಜನಕ ರಪ್ತು ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಖಾಸಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಮೀಸಲಾದ ಹಾಸಿಗೆಗಳು 7621, ಭರ್ತಿಯಾಗಿರುವುದು 6123, ಲಭ್ಯ ಇರುವುದು 1487. ನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ 15ಸಾವಿರಕ್ಕೂ ಹೆಚ್ಚು. ಈ ವಾಸ್ತವವನ್ನು ಕರ್ನಾಟಕ ಮುಖ್ಯಮಂತ್ರಿಯವರು ನಿಮಗೇನಾದರೂ ತಿಳಿಸಿದ್ದಾರೆಯೇ ಎಂದು ಮತ್ತೊಂದು ಟ್ವೀಟ್​ನಲ್ಲಿ ಸಿದ್ದರಾಮಯ್ಯ ಮೋದಿ ಅವರನ್ನು ಪಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಶೇ 65ರಷ್ಟು ಸಾಮಾನ್ಯ ಹಾಸಿಗೆ, ಶೇ 96ರಷ್ಟು ಬಹು ಅವಲಂಬನೆಯ ಹಾಸಿಗೆ, ಶೇ 98ರಷ್ಟು ಐಸಿಯು ಹಾಸಿಗೆ ಮತ್ತು ಶೇ 97ರಷ್ಟು ವೆಂಟಿಲೇಟರ್ ಹಾಸಿಗೆ ಭರ್ತಿಯಾಗಿವೆ. ನಿತ್ಯ 15 ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆ ಎದುರು ಕ್ಯೂ ನಿಲ್ಲುತ್ತಿದ್ದಾರೆ. ಅವರದ್ದೇನು ಗತಿ ಪ್ರಧಾನಿಯವರೇ ಎಂದು ಸಿದ್ದರಾಮಯ್ಯ ತಮ್ಮ ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.

'ಪರಿಸ್ಥಿತಿ ಕೈ ಮೀರಿಹೋಗಿದೆ' ಎಂದು ಯಡಿಯೂರಪ್ಪನವರು ಜನತೆಯ ಮುಂದೆ ಗೋಳಾಡುತ್ತಿರುವುದರಿಂದ ಪ್ರಶ್ನೆ ನಿಮ್ಮನ್ನೇ ಕೇಳಬೇಕಾಗಿದೆ. ಕೈಲಾಗದ ಮುಖ್ಯಮಂತ್ರಿಯವರನ್ನು ಇಟ್ಟುಕೊಂಡು ಕೊರೊನಾ ನಿಯಂತ್ರಣ ಮಾಡುವುದಾದರೂ ಹೇಗೆ ಪ್ರಧಾನಿಗಳೇ? ಎಂದು ಸಿದ್ದರಾಮಯ್ಯ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net