ನೀನು ಹೆಣ್ಣಾ, ನಿನಗೆ ಏನಾದರೂ ತಿಳಿದಿದೆಯಾ; ಶಾಸಕಿ ಕುರಿತು ನಿತೀಶ್​ ಕುಮಾರ್​ ಮಾತು ವೈರಲ್

Nitish Kumar
Published on

ಪಟ್ನಾ: ಇತ್ತೀಚಿಗೆ ರಾಷ್ಟ್ರವ್ಯಾಪಿ ಸಖತ್​ ಸೌಂಡ್​ ಮಾಡಿದ ನೀಟ್​ ಯುಜಿ ಪೇಪರ್​ ಲೀಕ್​ ಹಗರಣ ಹಾಗೂ ಸರ್ಕಾರಿ ನೇಮಕಾತಿಗಳಲ್ಲಿ ಅವ್ಯವಹಾರ ತಡೆಯುವ ಉದ್ದೇಶದಿಂದ ಬಿಹಾರ ವಿಧಾನಸಭೆಯಲ್ಲಿ ಹೊಸ ಮಸೂದೆಯನ್ನು ಅಂಗೀಕರಿಸಲಾಗಿದ್ದು, ನಿತೀಶ್​ ಕುಮಾರ್​ ನೇತೃತ್ವದ ಸರ್ಕಾರದ ನಡೆಯನ್ನು ಖಂಡಿಸಿ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

ಧ್ವನಿ ಮತದ ಮೂಲಕ ಅಂಗೀಕಾರವಾದ ಮಸೂದೆಯನ್ನು ವಿರೋಧಿಸಿದ ವಿಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ತಾಳ್ಮೆ ಕೆಳದುಕೊಂಡ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮಹಿಳೆಯಾಗಿ ನಿನಗೇನೂ ಗೊತ್ತೊಲ್ವಾ ಎಂದು ಆರ್​ಜೆಡಿ ಶಾಸಕಿ ಮೇಲೆ ಕೂಗಾಡಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಸದನವನ್ನು ಉದ್ಧೇಶಿಸಿ ನಿತೀಶ್​ ಕುಮಾರ್​ ಭಾಷಣ ಮಾಡುತ್ತಿದ್ದರು. ಈ ವೇಳೆ ಆರ್​ಜೆಡಿ ಶಾಸಕಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ವೇಳೆ ಕೋಪಗೊಂಡ ನಿತೀಶ್​ ನೀನು ಹೆಣ್ಣಾ ನಿನಗೇನೂ ಗೊತ್ತಿಲ್ವಾ ನೋಡು ಆಕೆ ಮಾತನಾಡುತ್ತಿದ್ದಾಳೆ. ನೀವು ವಿಪಕ್ಷದವರು ಹೆಣ್ಣು ಮಕ್ಕಳಿಗೆ ಏನು ಮಾಡಿದ್ದೀರಾ ನಾವು ಮಾತನಾಡುತ್ತೇನೆ ನೀವು ಏನಾದರೂ ಮಾಡಿಕೊಳ್ಳಿ ಎಂದು ನಿತೀಶ್​ ಕುಮಾರ್​ ತಮ್ಮ ಭಾಷಣವನ್ನು ಮುಂದುವರೆಸಿದ್ದಾರೆ.

ನಿತೀಶ್​ ಕುಮಾರ್​ ಹೇಳಿಕೆಯನ್ನು ಖಂಡಿಸಿರುವ ಮಾಜಿ ಡಿಸಿಎಂ ತೇಜಸ್ವಿ ಯಾದವ್, ನೀವು ಮಹಿಳೆ, ನಿಮಗೆ ಏನಾದರೂ ತಿಳಿದಿದೆಯೇ ಎಂದು​ ಅನಗತ್ಯ, ಅನಾಗರಿಕ, ಅಸಭ್ಯ ಮತ್ತು ಕೀಳು ಮಟ್ಟದ ಕಾಮೆಂಟ್‌ಗಳನ್ನು ಮಾಡುವುದು ನಿತೀಶ್​ ಕುಮಾರ್​ಗೆ ಅಭ್ಯಾಸವಾಗೊ ಹೋಗಿದೆ. ಕೆಲವು ದಿನಗಳ ಹಿಂದೆ ಬುಡಕಟ್ಟು ವರ್ಗದ ಬಿಜೆಪಿ ಮಹಿಳಾ ಶಾಸಕಿಯ ಸೌಂದರ್ಯದ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದ ಮುಖ್ಯಮಂತ್ರಿಗಳು ಇಂದು ಎರಡು ಬಾರಿ ಪರಿಶಿಷ್ಟ ಜಾತಿಯ ಮಹಿಳಾ ಶಾಸಕಿ ರೇಖಾ ಪಾಸ್ವಾನ್ ಅವರ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನನ್ನ ಪ್ರಕಾರ ಮುಖ್ಯಮಂತ್ರಿಗಳಿಗೆ ಇದನ್ನು ಬಿಟ್ಟರೆ ಬೇರೇನೂ ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net