

ಬೆಂಗಳೂರು: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಾತ್ರವಲ್ಲದೆ ಅವರ ಇಡೀ ಕುಟುಂಬವೇ ಆಂಜನೇಯ ದೇವರ ಮೇಲೆ ಅಪಾರ ಭಕ್ತಿ ಇಟ್ಟುಕೊಂಡಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ತಮ್ಮ ನೆಚ್ಚಿನ ದೇವರಿಗಾಗಿ ಅವರು ನಿರ್ಮಿಸಿರುವ ಭವ್ಯ ದೇವಸ್ಥಾನದ ಕುಂಭಾಭಿಷೇಕವನ್ನೂ ಈಗ ಸಾರ್ವಜನಿಕರೂ ಸರಾಗವಾಗಿ ವೀಕ್ಷಿಸಬಹುದು.
ತಾವು ನಿರ್ಮಿಸುತ್ತಿರುವ ಆಂಜನೇಯ ದೇವರ ದೇವಸ್ಥಾನ ನಿರ್ಮಾಣ ಪ್ರಕ್ರಿಯೆ ಪರಿಪೂರ್ಣವಾಗಿ ಮುಗಿದಿದ್ದು, ಇದೇ ಜುಲೈ 1 ಮತ್ತು 2ರಂದು ಕುಂಭಾಭಿಷೇಕ ಹಮ್ಮಿಕೊಳ್ಳಲಾಗಿದೆ ಎಂದು ಖುದ್ದು ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ. ಈ ದೇವತಾ ಕಾರ್ಯಕ್ಕೆ ಗೆಳೆಯರು, ಆಪ್ತರು, ಬಂಧು-ಬಳಗ ಸೇರಿ ಹಲವಾರು ಮಂದಿಯನ್ನು ಆಹ್ವಾನಿಸಿ ನೆರವೇರಿಸಬೇಕು ಅಂತಂದುಕೊಂಡಿದ್ದ ಮಹದಾಸೆ ಇಟ್ಟುಕೊಂಡಿದ್ದರೂ ಅದು ಈ ಕರೊನಾ ಹಿನ್ನೆಲೆಯಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅದಾಗ್ಯೂ ಎಲ್ಲರಿಗೂ ಈ ದೇವರ ಹಾಗೂ ದೇವತಾ ಕಾರ್ಯದ ದರ್ಶನ ಸಂಪೂರ್ಣವಾಗಿ ಸಿಗಲಿ ಎಂಬ ಉದ್ದೇಶದಿಂದ ಅವರು ಇಡೀ ಧಾರ್ಮಿಕ ವಿಧಿ-ವಿಧಾನಗಳನ್ನು ನೇರಪ್ರಸಾರ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಚೆನ್ನೈನಲ್ಲಿ ನಿರ್ಮಿಸಲಾಗಿರುವ ಈ ಆಂಜನೇಯ ದೇವಸ್ಥಾನದ ಕುಂಭಾಭಿಷೇಕವನ್ನು ಯೂ-ಟ್ಯೂಬ್ನಲ್ಲಿ ಜು. 1 ಮತ್ತು 2ರಂದು ನೇರಪ್ರಸಾರ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಕರೊನಾ ಸಂಕಷ್ಟವೆಲ್ಲ ಮುಗಿದ ಬಳಿಕ ಸಾರ್ವಜನಿಕರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನವನ್ನು ಪಡೆಯಬೇಕು ಎಂದು ಅವರು ಕೋರಿಕೊಂಡಿದ್ದಾರೆ.