

ಧಾರವಾಡ: ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಚನ್ನಕೇಶವ ಟಿಂಗರೀಕರ್ಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಯೋಗೀಶ್ಗೌಡ ಕೊಲೆಯಾದ ಸಂದರ್ಭದಲ್ಲಿ ಚನ್ನಕೇಶವ ಟಿಂಗರೀಕರ್ ಇಲ್ಲಿನ ಉಪನಗರ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದರು. ಈ ಕೇಸ್ನ ಸಾಕ್ಷ್ಯನಾಶ ಪಡಿಸಿದ ಆರೋಪ ಎದುರಿಸುತ್ತಿರುವ ಟಿಂಗರೀಕರ್ಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ಜಾರಿ ಮಾಡಿತ್ತು. ಸದ್ಯ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ನಲ್ಲಿ ಇನ್ಸ್ಪೆಕ್ಟರ್ ಆಗಿರುವ ಟಿಂಗರೀಕರ್, ಹಲವು ದಿನಗಳಿಂದ ವೈದ್ಯಕೀಯ ರಜೆ ಮೇಲಿದ್ದಾರೆ. ಸಿಬಿಐ ಬಂಧನ ಭೀತಿಯಿಂದ ಕೆಲ ದಿನ ನಾಪತ್ತೆ ಆಗಿದ್ದರು. ಜಿಲ್ಲಾ 3ನೇ ಹೆಚ್ಚುವರಿ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಈ ಹಿಂದೆ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಹೀಗಾಗಿ ನ.9ರಂದು ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ವೇಳೆ ಸಿಬಿಐ ಪರ ವಕೀಲ ಸುದರ್ಶನ್, ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಿದರು. ಟಿಂಗರೀಕರ್ ಅವರು ಯೋಗೀಶ್ ಗೌಡ ಹತ್ಯೆ ಪ್ರಕರಣದ ತನಿಖಾಧಿಕಾರಿ ಆಗಿದ್ದರು. ಹೀಗಾಗಿ ಅವರನ್ನು ವಿಚಾರಣೆ ನಡೆಸಬೇಕಿದೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಕೋರ್ಟ್ಗೆ ಮನವಿ ಮಾಡಿದರು.
ಸಿಬಿಐ ವಿಚಾರಣೆಗೆ ಸಹಕಾರ ನೀಡಲಿದ್ದಾರೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಟಿಂಗರೀಕರ್ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದರು.
ವಾದ- ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ಸೋಮವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದರು.