

ಕೋಲ್ಕತ: ಒಬ್ಬ ಅಪ್ಪನನ್ನು ಆತನ ಮಗಳು ಇಷ್ಟ ಪಡುವಷ್ಟು ಬೇರಾರು ಇಷ್ಟ ಪಡಲು ಸಾಧ್ಯವಿಲ್ಲವೆನ್ನುತ್ತಾರೆ. ಮಗಳ ಪ್ರೀತಿ ಅದ್ಭುತಗಳನ್ನು ಸೃಷ್ಟಿಸುವ ಶಕ್ತಿ ಹೊಂದಿದೆ. ಪೊಲೀಸರಿಂದ ಬಂಧನಕ್ಕೆ ಒಳಗಾದ ವ್ಯಕ್ತಿಯೊಬ್ಬ ತನ್ನ ಮಗಳು ತನ್ನ ಮೇಲಿಟ್ಟಿದ್ದ ಪ್ರೀತಿಯಿಂದಲೇ ಬಿಡುಗಡೆಯಾಗಿ ಬಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ರಾಜ್ಯದ ಬುಲಂದ್ಶರ್ನ ಖುರ್ಜಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬ ಪಟಾಕಿ ಮಾರಾಟ ಮಾಡುತ್ತಿದ್ದ. ರಾಜ್ಯದಲ್ಲಿ ಪಟಾಕಿ ಬ್ಯಾನ್ ಮಾಡಿದ್ದರೂ ಅದರ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಅಂಗಡಿಯಿಂದ ಎಳೆದುಕೊಂಡು ಬಂದು ಪೊಲೀಸ್ ಗಾಡಿಯತ್ತ ಕರೆದೊಯ್ದಿದ್ದಾರೆ. ಆ ಸಮಯದಲ್ಲಿ ಅಂಗಡಿಯಲ್ಲಿದ್ದ ಅವರ ಮಗಳು ಅಪ್ಪನನ್ನು ಅರೆಸ್ಟ್ ಮಾಡಬೇಡಿ ಎಂದು ಗೋಳಾಡಿದ್ದಾಳೆ.
ದಾರಿಯುದ್ದಕ್ಕೂ ತನ್ನ ತಂದೆಯನ್ನು ಪೊಲೀಸರ ಕೈಯಿಂದ ಬಿಡಿಸುವ ಪ್ರಯತ್ನ ಮಾಡಿದ್ದಾಳೆ. ಆತನನ್ನು ಪೊಲೀಸರು ಗಾಡಿಯೊಳಗೆ ಕೂರಿಸಿದ ತಕ್ಷಣ, ಗಾಡಿಯ ಡ್ರೈವರ್ ಬಳಿ ಮಗಳು ಓಡಿದ್ದಾಳೆ. ನನ್ನ ತಂದೆಯನ್ನು ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದಾಳೆ. ಅವರು ಆಗುವುದಿಲ್ಲವೆಂದಾಗ ಅದೇ ಗಾಡಿಗೆ ತನ್ನ ತಲೆಯನ್ನು ಮೂರ್ನಾಲ್ಕು ಬಾರಿ ಚಚ್ಚಿಕೊಂಡಿದ್ದಾಳೆ. ನಂತರ ಪೊಲೀಸರು ಆಕೆಯನ್ನು ದೂರಕ್ಕೆ ಸರಿಸಿ, ಬೇರೆಯವರನ್ನು ಗಾಡಿಯೊಳಗೆ ಕೂರಿಸಲಾರಂಭಿಸಿದ್ದಾರೆ.
ಈ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಷ್ಟರ ಮಟ್ಟಿಗೆ ವಿಡಿಯೋ ಹರಿದಾಡಿದೆ ಅಂದರೆ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರೂ ಕೂಡ ವಿಡಿಯೋ ನೋಡಿದ್ದಾರೆ. ವಿಡಿಯೋದಲ್ಲಿರುವ ಹೆಣ್ಣು ಮಗುವಿಗೆ ತಂದೆಯ ಮೇಲಿರುವ ಪ್ರೀತಿಯನ್ನು ನೋಡಿ ಕರಗಿರುವ ಯೋಗಿ ಅವರು ಆಕೆಯ ತಂದೆಯನ್ನು ಬಿಡುಗಡೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ಆ ಮಗಳಿಗೆ ದೀಪಾವಳಿ ಪ್ರಯುಕ್ತ ವಿಶೇಷ ಸಿಹಿ ತಿನಿಸುಗಳನ್ನೂ ಕಳುಹಿಸಿಕೊಟ್ಟಿದ್ದಾರೆ. ಕೇವಲ ಸಿಎಂ ಮಾತ್ರವಲ್ಲ, ಆಕೆಯ ತಂದೆಯನ್ನು ಬಂಧಿಸಿದ್ದ ಪೊಲೀಸರು ಸಹ ಆಕೆಯ ಮನೆಗೆ ಬಂದು ಸಿಹಿ ನೀಡಿ ಹೋಗಿದ್ದಾರೆ. (ಏಜೆನ್ಸೀಸ್)