ಯೋಗವಾಸಿಷ್ಠ 211| ಐದು ಮಹಾಭೂತಗಳ ಸೃಷ್ಟಿಯಾದ ನಂತರ ಬ್ರಹ್ಮಾಂಡದ ಸೃಷ್ಟಿ (3.12.24ರಿಂದ 29)

Yogavasishta
Published on
ಪ್ರಳಯ ಆಖ್ಯಾಯಿಕೆಯ (ಪ್ರಳಯಾವಸ್ಥೆಯ ನಿರೂಪಣೆ) ನಂತರ ಸೃಷ್ಟಿ ಆಖ್ಯಾಯಿಕೆಯನ್ನು ಪ್ರಾರಂಭಿಸಿದ ಶ್ರೀ ವಸಿಷ್ಠರು ಈ ಹಿಂದೆ ಈಶ್ವರ-ಜೀವಗಳ ಆವಿರ್ಭಾವ, ಆಕಾಶ, ಅಹಂಕಾರ, ಆಕಾಶತನ್ಮಾತ್ರೆ, ವಾಯು, ತೇಜಸ್ಸು, ಜಲಗಳ ಸೃಷ್ಟಿಯನ್ನು ಹೇಳಿದ್ದಾರೆ. ಇದೀಗ ಸರದಿಯಂತೆ ಪೃಥ್ವಿಯ ಸೃಷ್ಟಿಯನ್ನು ಹೇಳುತ್ತಿದ್ದಾರೆ.

‘ಶ್ರೀರಾಮ! ಹಿಂದೆ ಹೇಳಿದಂತೆ ಜಲರೂಪ ಧರಿಸಿರುವ ಆ ಪರಾಶಕ್ತಿಯಿಂದ ಪೃಥ್ವಿ ಸೃಷ್ಟಿಯಾಗುತ್ತದೆ. ಅಂದರೆ ಜಲರೂಪದಿಂದಿರುವ ಪರಮಾತ್ಮನೇ ತನ್ನ ಜಲಸ್ವರೂಪವನ್ನು ಇಟ್ಟುಕೊಂಡೇ ಪೃಥ್ವಿಯ ರೂಪ ಧರಿಸುತ್ತಾನೆ. ಹಿಂದಿರುವ ಜಲಸ್ವರೂಪವನ್ನು ಕೈಬಿಡದೆ ಪೃಥ್ವಿಯೆಂಬ ಮತ್ತೊಂದು ರೂಪ ಧರಿಸುತ್ತಾನೆ. (ಇಲ್ಲಿ ಪೃಥ್ವಿ ಎಂದರೆ ಘನಪದಾರ್ಥ ಎಂದರ್ಥ. ನಾವು ಈಗ ವಾಸಮಾಡುತ್ತಿರುವ ಭೂಮಿ ಎಂಬ ಹೆಸರಿನ ಗ್ರಹವನ್ನು ಇಲ್ಲಿ ಪೃಥ್ವಿ ಎಂದು ಕರೆದಿಲ್ಲ. ಭೂಮಿಯ ಸೃಷ್ಟಿ ಇನ್ನು ಮೇಲೆ ಆಗಲಿದೆ. ಹಾಗೆಯೇ ಆಕಾಶ, ವಾಯು, ಅಗ್ನಿ, ಜಲಗಳನ್ನು ಇಲ್ಲಿ ಅರ್ಥೈಸಿಕೊಳ್ಳಬೇಕಾದ ರೀತಿ ಬೇರೆಯೇ ಆಗಿದೆ.) ಹೀಗೆ ತಾನು ಪೃಥ್ವಿಯ ರೂಪ ಧರಿಸಬೇಕೆಂಬ ಸಂಕಲ್ಪ ಅವನಲ್ಲುಂಟಾದ ಕೂಡಲೇ ಪೃಥ್ವಿಯ ಸೃಷ್ಟಿಯಾಗುತ್ತದೆ. ಆ ಪೃಥ್ವಿಯಲ್ಲಿರುವ ಗಂಧ ಎಂಬ ವಿಶೇಷ ಗುಣವನ್ನು ಸಂಕಲ್ಪಿಸಿದ ಕೂಡಲೇ ಅವನು ಗಂಧತನ್ಮಾತ್ರೆಯನ್ನು ಕಾಣುತ್ತಾನೆ. ಅಂದರೆ ಗಂಧತನ್ಮಾತ್ರೆಯ ಸೃಷ್ಟಿಯಾಗುತ್ತದೆ. ಈ ಗಂಧತನ್ಮಾತ್ರೆಯಿಂದಲೇ ಮುಂದೆ ಭೂಗೋಳ ಸೃಷ್ಟಿಯಾಗುತ್ತದೆ. ಅಲ್ಲದೆ ಬ್ರಹ್ಮಾಂಡದಲ್ಲಿರುವ ಎಲ್ಲ ಗೋಳಗಳು ಇದರಿಂದಲೇ ಸೃಷ್ಟಿಯಾಗಲಿವೆ. ಮನುಷ್ಯನೇ ಮೊದಲಾದ ಎಲ್ಲ ಪ್ರಾಣಿಗಳ ಶರೀರಾಕೃತಿಗಳು ಈ ಪೃಥ್ವಿತನ್ಮಾತ್ರೆಯಿಂದಲೇ (ಗಂಧತನ್ಮಾತ್ರೆ) ಹುಟ್ಟಿಕೊಳ್ಳುತ್ತವೆ. ಎಲ್ಲ ಪ್ರಾಣಿಗಳ ಶರೀರಾಕೃತಿಗಳೆಂಬ ಮಹಾವೃಕ್ಷಕ್ಕೆ ಗಂಧತನ್ಮಾತ್ರೆಯೇ ಬೀಜವಾಗಿದೆ. ಎಲ್ಲ ಪ್ರಾಣಿಗಳ ಶರೀರಗಳ ಮೂಲಕವೇ ಸಂಸಾರ ನಡೆಯುವುದರಿಂದ ಈ ಸಂಸಾರಚಕ್ರವು ಪ್ರವರ್ತಿಸಲು ಗಂಧತನ್ಮಾತ್ರೆ ಕಾರಣವಾಗಿದೆ.’

‘ಹೀಗೆ ಐದು ಮಹಾಭೂತಗಳ ಸೃಷ್ಟಿಯಾದ ನಂತರ ಬ್ರಹ್ಮಾಂಡದ ಸೃಷ್ಟಿ. (ಬ್ರಹ್ಮಾಂಡ ಎಂದರೆ ಹದಿನಾಲ್ಕು ಭುವನಗಳನ್ನು ಒಳಗೊಂಡ ವಿಸ್ತಾರವಾದ ಲೋಕ.

ಈ ಬ್ರಹ್ಮಾಂಡವೇ ಹಿರಣ್ಯಗರ್ಭನ ಶರೀರ.) ಎಲ್ಲ ಮಹಾಭೂತಗಳು ಒಟ್ಟಿಗೆ ಸೇರಿ ಬ್ರಹ್ಮಾಂಡದ ಸೃಷ್ಟಿಯಾಗುತ್ತದೆ. ಹಿಂದೆ ಆವಿರ್ಭವಿಸಿದ ಅಹಂಕಾರದಿಂದ ಕೂಡಿದ ಪ್ರಥಮಜೀವನು ಎಲ್ಲ ಮಹಾಭೂತಗಳಿಂದ ಬ್ರಹ್ಮಾಂಡದ ಸೃಷ್ಟಿಯಾಗಬೇಕೆಂದು ಸಂಕಲ್ಪಿಸಿದಾಗ ಎಲ್ಲ ತನ್ಮಾತ್ರೆಗಳು ಪರಸ್ಪರ ಕೂಡಿಕೊಳ್ಳುತ್ತವೆ. ನೀರಿನಲ್ಲಿ ಗುಳ್ಳೆ ಉತ್ಪತ್ತಿಯಾಗುವಂತೆ ಹದಿನಾಲ್ಕು ಭುವನಗಳುಳ್ಳ ಈ ಬ್ರಹ್ಮಾಂಡ ಸೃಷ್ಟಿಯಾಗುತ್ತದೆ.’

‘ಐದು ತನ್ಮಾತ್ರೆಗಳ ಮಿಶ್ರಣದಿಂದ ಈ ಜಗತ್ತು ಉಂಟಾಗಿದೆ. ಈ ಜಗತ್ತು ಇರುವವರೆಗೂ ತನ್ಮಾತ್ರೆಗಳು ಪರಸ್ಪರ ಕೂಡಿಕೊಂಡೇ ಇರುತ್ತವೆ. ಏಕೆಂದರೆ ಅವು ಕೂಡಿಕೊಂಡಿದ್ದರೆ ಮಾತ್ರ ಜಗತ್ತಿನ ಎಲ್ಲ ಘಟಕಗಳು ಅಸ್ತಿತ್ವದಲ್ಲಿರುತ್ತವೆ. ಮುಂದೆ ಮತ್ತೆ ಮಹಾಪ್ರಳಯ ಆಗುವ ಸಂದರ್ಭ ಬಂದಾಗ ಅವು ಮತ್ತೆ ತಮ್ಮ ಮೂಲಸ್ವರೂಪಕ್ಕೆ ಹೋಗುತ್ತವೆ. ಅಲ್ಲಿಯ ತನಕ ಶುದ್ಧವಾದ ಅಂದರೆ ಮಿಶ್ರಣವಿಲ್ಲದ ಪಂಚತನ್ಮಾತ್ರೆಗಳು ದೊರೆಯುವುದಿಲ್ಲ.’

‘ಈ ತನ್ಮಾತ್ರೆಗಳು ಪರಸ್ಪರ ಮಿಶ್ರಣದೊಂದಿಗೆ ಸ್ಥೂಲರೂಪ ಪಡೆದಿರುವಿಕೆಯೇ ಈ ಜಗತ್ತಿನ ಅಸ್ತಿತ್ವ. ಹೀಗೆ ಸ್ಥೂಲರೂಪ ಪಡೆದಿರುವುದಕ್ಕಿಂತ ಮುಂಚೆ ಅವು ಸೂಕ್ಷ್ಮರೂಪದಿಂದಿದ್ದವು. ಅದಕ್ಕಿಂತ ಮುಂಚೆ ಪರಬ್ರಹ್ಮಸ್ವರೂಪದಲ್ಲೇ ಇದ್ದವು. ಹೀಗೆ ಮೂಲತಃ ಅವು ಪರಬ್ರಹ್ಮಸ್ವರೂಪದಲ್ಲೇ ಇದ್ದುದ್ದರಿಂದ ಅವುಗಳ ಇರುವಿಕೆ ಪರಬ್ರಹ್ಮಕ್ಕಿಂತ ಬೇರೆಯಲ್ಲ. ಅವು ಪರಬ್ರಹ್ಮವೆಂಬ ತಮ್ಮ ಮೂಲಸ್ಥಿತಿಯಿಂದ ವಿಕಾಸಗೊಂಡು ಸೂಕ್ಷ್ಮ ಪಂಚತನ್ಮಾತ್ರೆಯ ಸ್ಥಿತಿಗೆ ಬರುತ್ತವೆ. ಆಗ ಅವು ‘ಅವ್ಯಾಕೃತ’ ಎಂಬ ಆಕಾಶದ ಒಳಗೆ ಇರುತ್ತವೆ. ‘ಅವ್ಯಾಕೃತ’ ಆಕಾಶವೆಂದರೆ ಪರಮಾತ್ಮನ ಮೂಲಪ್ರಕೃತಿ. ಅದನ್ನು ಮಾಯೆ ಎಂದೂ ಕರೆಯುತ್ತಾರೆ. ಸೂಕ್ಷ್ಮ ಪಂಚತನ್ಮಾತ್ರೆಗಳು ‘ಅವ್ಯಾಕೃತ’ ಆಕಾಶದಲ್ಲಿದ್ದುದರಿಂದಲೇ ಅವುಗಳಿಂದ ಹುಟ್ಟಿದ ಈ ಸ್ಥೂಲ ಜಗತ್ತು ಕೂಡ ಆ ಪರಮಾತ್ಮಪ್ರಕೃತಿಯಲ್ಲಿಯೇ ನಿಂತಿದೆ. ಹೇಗೆ ವಟವೃಕ್ಷದ ಚಿಕ್ಕ ಬೀಜದಲ್ಲಿ ವಿಸ್ತಾರವಾದ ವಟವೃಕ್ಷವು ನಿಂತಿದೆಯೋ ಹಾಗೆ.’

‘ಈಗೊಂದು ಪ್ರಶ್ನೆ; ತನ್ಮಾತೆಗಳು ಸೂಕ್ಷ್ಮವಾಗಿರುತ್ತವೆ.

ಈ ಜಗತ್ತಾದರೋ ಸ್ಥೂಲವಾಗಿದೆ. ಸೂಕ್ಷ್ಮದಲ್ಲಿ ಸ್ಥೂಲವಾದದ್ದು ಅಂದರೆ ಸಣ್ಣದರಲ್ಲಿ ದೊಡ್ಡದು ಇರುವುದು ಹೇಗೆ? ಸ್ವಪ್ನದಲ್ಲಿ ವಿಸ್ತಾರವಾದ ಪ್ರದೇಶಗಳ ಅನುಭವವಾಗುತ್ತದೆ. ಆಗ ಜೀವಾತ್ಮನ ಮನಸ್ಸು ಸೂಕ್ಷ್ಮ ನಾಡಿಗಳಲ್ಲಿ ಸಂಚರಿಸುತ್ತಿರುತ್ತದೆ. ಸೂಕ್ಷ್ಮ ನಾಡಿಗಳ ರಂಧ್ರಗಳಲ್ಲಿ ವಿಸ್ತಾರವಾದ ಪ್ರದೇಶ ತೋರಿಕೊಳ್ಳುತ್ತದೆ. ಹಾಗೆಯೇ ಸೂಕ್ಷ್ಮ ತನ್ಮಾತ್ರೆಗಳಲ್ಲಿ ಸ್ಥೂಲ ಜಗತ್ತು ತೋರಿಕೊಂಡಿದೆ. ಇಲ್ಲಿ ಹೀಗೆ ತೋರಿಕೊಳ್ಳುವಿಕೆಯೇ ಹುಟ್ಟುವಿಕೆ. ಪರಮಾಣುವಿನ ಒಳಗೂ ಈ ರೀತಿಯ ಹುಟ್ಟುವಿಕೆ ಸಾಧ್ಯವಿದೆ. ಅಷ್ಟೇ ಅಲ್ಲ, ಹುಟ್ಟಿದ ಒಂದೇ ಕ್ಷಣದಲ್ಲಿ ಕಲ್ಪದಷ್ಟು ವಿಸ್ತಾರವೂ ಆಗುತ್ತದೆ.’ (ಕಲ್ಪ ಎಂದರೆ ಒಂದು ಸಾವಿರ ಮಹಾಯುಗಗಳುಳ್ಳ ಬ್ರಹ್ಮದೇವನ ಒಂದು ಹಗಲು.)

ಪ್ರತಿಕ್ರಿಯಿಸಲು: info.swarnavalli@gmail.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net