

‘ಜೀವನ್ಮುಕ್ತನಾದ ಜ್ಞಾನಯೋಗಿಯ ಶರೀರವು, ಅದು ಮನೋಮಯವೇ ಆಗಿದೆ ಎಂಬ ವಸ್ತುಸ್ಥಿತಿಯ ಚಿಂತನೆಯಿಂದ, ಮನೋಮಯಭಾವ (ಆತಿವಾಹಿಕಭಾವ)ವನ್ನೇ ಪಡೆಯುತ್ತದೆಯೋ ಅಥವಾ ಜನಸಾಮಾನ್ಯರ ಶರೀರದಂತೆ ಮರಣಕಾಲದಲ್ಲಿ ನಾಶವಾಗುತ್ತ ದೆಯೋ?’ ಇದು ಶ್ರೀದೇವಿಯ ಸನ್ನಿಧಿಯಲ್ಲಿ ಲೀಲಾಮಹಾರಾಣಿಯ ಪ್ರಶ್ನೆಯಾಗಿತ್ತು. ಈ ಸರ್ಗದ 57ನೆಯ ಶ್ಲೋಕದಲ್ಲಿ ಈ ಪ್ರಶ್ನೆಯು ಉಲ್ಲೇಖಗೊಂಡಿದೆ. ಇದಕ್ಕೆ ಶ್ರೀದೇವಿಯ ಉತ್ತರವು ವಿಚಿತ್ರವಾಗಿದೆ. ವಸ್ತುತಃ ಯಾವುದು ಇದೆಯೋ, ಅದನ್ನು ಕುರಿತು ನಾಶವಾಗುತ್ತದೆಯೇ, ಇಲ್ಲವೇ ಎಂಬ ಪ್ರಶ್ನೆ ಬರುತ್ತದೆ. ವಸ್ತುತಃ ಇಲ್ಲದ ಶರೀರಕ್ಕೆ ಈ ಪ್ರಶ್ನೆ ಬರುವುದಿಲ್ಲ. ಶ್ರೀದೇವಿಯ ಉತ್ತರ ಪ್ರಾರಂಭವಾದದ್ದು ಹೀಗೆ. ಸ್ಥೂಲಶರೀರವು ವಸ್ತುತಃ ಆತಿವಾಹಿಕವೇ ಆಗಿದೆ ಎಂಬುದು ವಸ್ತುಸ್ಥಿತಿಯಾದರೂ, ಅದು ಬ್ರಹ್ಮವೇ ಆಗಿದೆ ಎಂಬುದು ಇನ್ನೂ ಎತ್ತರದ ವಸ್ತುಸ್ಥಿತಿ. ಪ್ರಪಂಚವೆಲ್ಲವೂ ಬ್ರಹ್ಮವೇ ಆಗಿದೆ ಎಂಬುದು ಆ ಎತ್ತರದ ವಸ್ತುಸ್ಥಿತಿ. ಇದನ್ನೇ ವೇದಾಂತಿಗಳು ಪಾರಮಾರ್ಥಿಕ ಸತ್ಯ ಎಂಬುದಾಗಿ ಕರೆಯುತ್ತಾರೆ. ಆ ದೃಷ್ಟಿಯಿಂದ ಶರೀರವು ವಸ್ತುತಃ ಶರೀರವಲ್ಲ, ಅದು ಬ್ರಹ್ಮವೇ ಆಗಿದೆ. ಇದು ಶ್ರೀದೇವಿಯ ಉತ್ತರದ ಆಶಯ.
ಪಾರಮಾರ್ಥಿಕ ಸತ್ಯ ಹೀಗಿದ್ದರೂ ಶರೀರವು ವಸ್ತುತಃ ಆತಿವಾಹಿಕವಾಗಿದೆ ಎಂಬ ಎರಡನೇ ಸತ್ಯವನ್ನು ಇಲ್ಲಿ ಕೈಬಿಟ್ಟಿಲ್ಲ. ವ್ಯಾಖ್ಯಾನಕಾರರಾದ ಶ್ರೀಮದಾನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು 58ನೆಯ ಶ್ಲೋಕದ ವ್ಯಾಖ್ಯಾನದಲ್ಲಿ ಇದನ್ನು ಪ್ರಕಟಗೊಳಿಸಿದ್ದಾರೆ. ಜೀವನ್ಮುಕ್ತನಾದ ಜ್ಞಾನಯೋಗಿಯ ಶರೀರವು ಕೊನೆಯಲ್ಲಿ ಆತಿವಾಹಿಕ ಭಾವವನ್ನೇ ಹೊಂದುತ್ತದೆಯೇ ಹೊರತು ಉಳಿದ ಸಾಮಾನ್ಯಜನರ ಶರೀರದಂತೆ ನಾಶವಾಗುವುದಿಲ್ಲ ಎಂಬುದನ್ನು ಅಲ್ಲಿ ಅವರು ಹೇಳಿದ್ದಾರೆ. ಇದೊಂದು ಅದ್ಭುತವಾದ ಸಂಗತಿ.
ಶ್ರೀದೇವಿಯ ಉತ್ತರ ಸದ್ಯಕ್ಕೆ ಎಲ್ಲವೂ ಬ್ರಹ್ಮವೆಂಬ ಪರಮಾರ್ಥ ಸತ್ಯವನ್ನೇ ಹೇಳುತ್ತಾ ಮುಂದುವರಿದಿದೆ. ಎಲ್ಲವೂ ಪರಮಾರ್ಥತಃ ಬ್ರಹ್ಮವೇ ಎಂದಾದರೆ ನಾವೆಲ್ಲ ಇದನ್ನರಿಯದೇ ಜಗತ್ತನ್ನು ಜಡತ್ವ ಬುದ್ಧಿಯಿಂದಲೇ ನೋಡುತ್ತ ಬಂದಿದ್ದೇವೆ. ದ್ವೈತ ಸತ್ಯವೋ, ಅದ್ವೈತ ಸತ್ಯವೋ ಎಂಬ ಗೊಂದಲದಲ್ಲಿಯೇ ನಾವೆಲ್ಲ ಇದ್ದೇವೆ. ಈ ಭ್ರಮೆಗೆ ಕಾರಣವೇನು? ಎಂಬುದಾಗಿ ಲೀಲಾ ಮಹಾರಾಣಿಯು ಈಗ ಪ್ರಶ್ನೆ ಇಟ್ಟಿದ್ದಾಳೆ. ಅನಾದಿಕಾಲದಿಂದ ಪ್ರವೃತ್ತವಾಗಿರುವ ‘ಅವಿಚಾರ’ (ಮೋಹ)ದಿಂದಾಗಿ ನಾವೆಲ್ಲರೂ ಬ್ರಹ್ಮಕ್ಕಿಂತ ಭಿನ್ನವಾಗಿ, ಜಡವಾಗಿ ಜಗತ್ತನ್ನು ನೋಡುತ್ತ ಬಂದಿದ್ದೇವೆ.ಈಗ ಶ್ರೀದೇವಿಯ ಉತ್ತರ ಮುಂದುವರಿಯುತ್ತಿದೆ ‘ಮಗಳೇ! ಈ ‘ಅವಿಚಾರ’ವು ವಿಚಾರದಿಂದ ನಾಶವಾಗುತ್ತದೆ. ವಿಚಾರವೆಂದರೆ ವಸ್ತುಸ್ಥಿತಿಯ ಅನುಭವಾತ್ಮಕ ಚಿಂತನೆ. ಅಂತಹ ಪ್ರಾಮಾಣಿಕವಾದ ವಿಚಾರದಿಂದ ‘ಅವಿಚಾರ’ವು ಸ್ವಲ್ಪ ಹೊತ್ತಿನಲ್ಲೇ ನಾಶವಾಗುತ್ತದೆ. ಅನಂತರ ಬ್ರಹ್ಮದ ಸತ್ಯತೆಯೊಂದೇ ಉಳಿದುಕೊಳ್ಳುತ್ತದೆ. ಇಂತಹ ದರ್ಶನ ವಾದ ನಂತರ ಅವಿದ್ಯೆ ಉಳಿಯುವುದಿಲ್ಲ.’ ‘ಬ್ರಹ್ಮದ ಸತ್ಯತೆಯ ದರ್ಶನವಾದ ನಂತರ ಒಂದು ವಿಚಿತ್ರವಾದ ಸ್ಥಿತಿಗೆ ಜ್ಞಾನಿಯು ತಲುಪುತ್ತಾನೆ. ಜಗತ್ತು ತ್ರಿಕಾಲದಲ್ಲಿಯೂ ಇಲ್ಲ ಎಂಬುದೇ ಆ ಸ್ಥಿತಿ.
ಅಂದರೆ ಜಗತ್ತು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರಲು ಸಂಭವವಿಲ್ಲ ಎಂಬುದು ಅವನಿಗೆ ದೖಢವಾಗುತ್ತದೆ. (ಸ್ವಪ್ನದಿಂದ ಎಚ್ಚೆತ್ತುಕೊಂಡ ನಂತರ ಸ್ವಪ್ನದಲ್ಲಿ ಕಂಡ ದೖಶ್ಯಗಳು ಸ್ವಪ್ನದಲ್ಲಿ ಕಾಣುತ್ತಿರುವಾಗಲೂ ಇರಲಿಲ್ಲ, ಮೊದಲá-ಅನಂತರವೂ ಇಲ್ಲ ಎಂಬುದು ದೃಢವಾಗುತ್ತದೆ. ಹಾಗೆಯೇ ಇದು.) ಅವನಸ್ಥಿತಿ ಹೇಗಿರುತ್ತದೆ ಎಂದರೆ ಹಿಂದೆ ಇತ್ತು ಎಂದು ಹೇಳಲ್ಪಟ್ಟ ‘ಅವಿಚಾರ’,ಅವಿದ್ಯೆ, ಅದರಿಂದ ಉಂಟಾದ ಸಂಸಾರ ಬಂಧನ ಇವು ಯಾವುವೂ ತ್ರಿಕಾಲದಲ್ಲಿ ಇಲ್ಲ ಎಂದು ಅವನಿಗೆ ಅನುಭವವಾಗುತ್ತದೆ. ಬಂಧನವಿಲ್ಲದ್ದರಿಂದ, ಬಂಧ ನದನಾಶವೆಂಬ ಮೋಕ್ಷವೂ ಇಲ್ಲ. ಯಾವ ಅಡೆತಡೆಗಳಿಲ್ಲದ ಶುದ್ಧ ಜ್ಞಾನ ಸ್ವರೂಪಿ ಬ್ರಹ್ಮವೇ ಜಗತ್ತೆಲ್ಲವೂ. ಈ ತನಕ ನೀನು ಈ ‘ವಿಚಾರ’ವನ್ನು ಮಾಡಿರಲಿಲ್ಲ. ಆದ್ದರಿಂದ ನೀನು ಅಪ್ರಬುದ್ಧಳೂ, ಭ್ರಾಂತಳೂ, ಆಕುಲಿತಳೂ(ದುಃಖಿತಳೂ) ಆಗಿದ್ದೆ. ಆದರೆ ಈಗ ನಿನಗೆ ಎಚ್ಚರವಾಗಿದೆ.ಸತ್ಯಾಸತ್ಯಗಳ ವಿವೇಕ ನಿನಗೆ ಈಗ ಮೂಡಿದೆ. ಆದ್ದರಿಂದ ನೀನು ಮುಕ್ತಿಯನ್ನು ಪಡೆಯುತ್ತೀಯೆ. ಏಕೆಂದರೆ ‘ವಿಚಾರ’ದಿಂದ ಪ್ರಪಂಚವು ಬ್ರಹ್ಮಕ್ಕಿಂತ ಬೇರೆಯಾಗಿ ಸತ್ಯವಾಗಿಯೇ ಇದೆ ಎಂಬ ವಾಸನೆ (ಸಂಸ್ಕಾರ) ನಿನ್ನಲ್ಲಿ ನಾಶಗೊಳ್ಳುತ್ತದೆ. ಈ ವಾಸನೆಯ ಕ್ಷೀಣತೆ ಮತ್ತು ತತ್ತ್ವಜ್ಞಾನದ ವಾಸನೆಯು ಉಳಿದಿರುವಿಕೆ, ಇವುಗಳೇ ಮುಕ್ತಿಯ ಬೀಜವಾಗಿರುತ್ತವೆ. ಈ ಬೀಜವು ನಿನ್ನ ಮನಸ್ಸಿನಲ್ಲಿ ಈಗ ಬಿದ್ದಿದೆ. ‘ಆದರೂ ಮುಂದೆ ಮತ್ತೆ ‘ಪ್ರಪಂಚವು ಬ್ರಹ್ಮಕ್ಕಿಂತ ಬೇರೆಯಾಗಿ, ಸತ್ಯವಾಗಿಯೇ ಇದೆ’ ಎಂಬ ವಾಸನೆಯು ಹುಟ್ಟಿಕೊಳ್ಳುವುದಿಲ್ಲವೇ ಎಂದು ಕೇಳಬಹುದು. ಈ ವಾಸನೆ ಮತ್ತೆ ಹುಟ್ಟುವುದಿಲ್ಲ. ಏಕೆಂದರೆ ತತ್ತ್ವಜ್ಞಾನದ ವಾಸನೆ ಹೇಗಿರುತ್ತದೆ ಎಂದರೆ 0 ಈ ದೃಶ್ಯ ಜಗತ್ತು ಎಂಬ ಸಂಸಾರವು ಮೊದಲೂ ಉತ್ಪತ್ತಿಯಾಗಲಿಲ್ಲ, ಈಗ ಮತ್ತು ಮುಂದೆಯೂ ಇದು ಇಲ್ಲ ಎಂಬುದು ಜ್ಞಾನಿಗೆ ಖಚಿತವಾಗಿರುತ್ತದೆ. (ಸ್ವಪ್ನದಿಂದ ಎಚ್ಚೆತ್ತು ಕೊಂಡಾಗಿನ ಅನುಭವವೇ ಇದಕ್ಕೆ ಉದಾಹರಣೆ.) ‘ಪ್ರಪಂಚವು ತ್ರಿಕಾಲದಲ್ಲಿಯೂ ಇಲ್ಲ ಎಂಬುದು ದೃಢವಾದಾಗ ನೋಡುವವ (ದ್ರಷ್ಟಾ), ನೋಡಲ್ಪಡುವ ವಿಷಯ (ದೃಶ್ಯ) ಮತ್ತು ನೋಡುವಿಕೆ (ದೃಕ್)ಗಳು ಇಲ್ಲವಾಗುತ್ತವೆ. ಆಗ ಮನಸ್ಸನ್ನು ಆ ಏಕತತ್ತ್ವದ ಧ್ಯಾನವು ಆವರಿಸುತ್ತದೆ. ಅದುವೇ ನಿರ್ವಿಕಲ್ಪಕ ಸಮಾಧಿ. ಈ ಸಮಾಧಿಯು ಪ್ರಪಂಚಸತ್ಯತೆಯ ವಾಸನೆಯನ್ನು ಕ್ಷೀಣಗೊಳಿಸುವ ಬೀಜವಾಗಿದೆ. ಈ ಬೀಜವು ಮನಸ್ಸಿನಲ್ಲಿ ಸ್ವಲ್ಪ ಅಂಕುರಿಸಿದರೂ, ಮುಂದೆ ರಾಗದ್ವೇಷಗಳಿಂದ ಕೂಡಿದ ದೖಷ್ಟಿಯು ಉಂಟಾಗುವುದೇ ಇಲ್ಲ. ಮತ್ತೆ ಸಂಸಾರಬಂಧನ ಮುಂದುವರಿಯಬಹುದೆಂಬ ಶಂಕೆ ಕೂಡ ಮೂಲಸಹಿತವಾಗಿ ಹೊರಟುಹೋಗುತ್ತದೆ. ಒಟ್ಟಾರೆ ನಿರ್ವಿಕಲ್ಪಕ ಸಮಾಧಿಯ ಪರಿಪೂರ್ಣ ದೃಢತೆಯು ನಿನ್ನಲ್ಲಿ ಉಂಟಾಗಲಿದೆ.
‘ನಿರ್ವಿಕಲ್ಪಕಸಮಾಧಿಯ ದೃಢತೆಯಿಂದ ಮುಂದೆ ಕೆಲವೇ ಕಾಲದಲ್ಲಿ ನೀನು ಮೋಕ್ಷಸ್ವರೂಪಿಯೇ ಆಗುತ್ತೀಯೆ. ಮಾಯೆಗೆ ಮತ್ತು ಅದರ ಕಾರ್ಯಗಳಿಗೆ ಆಧಾರವಾಗಿರುವ ನಿರ್ಮಲವಾದ ಪರಮಾತ್ಮನನ್ನು ಅವಲಂಬಿಸುವ ಮೂಲಕ ಎಲ್ಲ ಭ್ರಾಂತಿಗಳನ್ನು ಕಳೆದುಕೊಂಡು ಶುದ್ಧಳಾಗುತ್ತೀಯೆ. ಭ್ರಾಂತಿಯೆಂಬ ಕಳಂಕವನ್ನು ಕಳೆದುಕೊಂಡವಳಾಗುತ್ತೀಯೆ. ಅಂದರೆ ಭ್ರಾಂತಿಯ ಎಲ್ಲ ವಾಸನೆಗಳು ನಿನ್ನಲ್ಲಿ ಕ್ಷಯಿಸಿಹೋಗುತ್ತವೆ. ಎಲ್ಲ ಜೀವಿಗಳ ಭ್ರಾಂತಿಗಳಿಗೆ ಮತ್ತು ಭ್ರಾಂತಿಗಳಿಂದ ಉಂಟಾದ ವಾಸನೆಗಳಿಗೆ ಕಾರಣವಾಗಿರುವ ಅವಿದ್ಯೆಯು ನಾಶವಾದಾಗ ಉಳಿದುಕೊಳ್ಳುವ ಪರಬ್ರಹ್ಮವೇ ಮೋಕ್ಷ ಸ್ವರೂಪ. ನೀನು ಅದನ್ನು ಪಡೆಯುತ್ತೀಯೆ, ಅಂದರೆ ನೀನು ಅದೇ ಆಗುತ್ತೀಯೆ. ಮೋಕ್ಷವೆಂಬ ಪರಮಪುರುಷಾರ್ಥವೇ ನೀನಾಗುತ್ತೀಯೆ.’
ಇಲ್ಲಿಗೆ ಉತ್ಪತ್ತಿಪ್ರಕರಣದ ಇಪ್ಪತ್ತೊಂದನೇ ಸರ್ಗವು ಮುಗಿಯುತ್ತದೆ.