

ರಾಣೆಬೆನ್ನೂರ: ಶರೀರ ಮನಸ್ಸು ಏಕಾಗ್ರಗೊಳಿಸುವುದೆ ಯೋಗವಾಗಿದ್ದು ಅದು ನಮ್ಮ ಜೀವನ ಪದ್ಧತಿ ಆಗಲಿ ಎಂದು ಮುಂಬೈ ರಾಮಕೃಷ್ಣ ಮಿಶನ್ದ ದಯಾಧಿಪಾನಂದಜಿ ಮಹಾರಾಜ್ ಹೇಳಿದರು.
ನಗರದ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಕಾಲೇಜ್ನ ಆವರಣದಲ್ಲಿ ಪತಂಜಲಿ ಯೋಗ ಪೀಠ, ಸ್ಥಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮ, ಕಾಕಿ ಜನಸೇವಾ ಸಂಸ್ಥೆ, ಗಾಯತ್ರಿ ಕೋಮಲಾಚಾರ್ ಯೋಗ ತರಬೇತಿ ಸಂಸ್ಥೆ ಹಾಗೂ ಕೆಎಲ್ಇ ಸಂಸ್ಥೆಯ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು. ನಿತ್ಯವೂ ಬೆಳಗ್ಗೆ ಯೋಗ ಸಾಧನೆ ಮಾಡಿದ್ದಲ್ಲಿ ನಿಜವಾದ ಯೋಗಿಗಳಾಗಲು ಸಾಧ್ಯ. ಯೋಗ ಜೀವನ ಪಾಲನೆಯಿಂದ ಶ್ರೇಷ್ಠ ಆರೋಗ್ಯ ಪ್ರಾಪ್ತಿಯಾಗುತ್ತದೆ. ಯೋಗ ಶರೀರವನ್ನು ಸಶಕ್ತಗೊಳಿಸುತ್ತದೆ. ಮನುಷ್ಯ ತನ್ನ ಆತ್ಮ ಅರಿತಾಗ ಶ್ರೇಷ್ಠ ವ್ಯಕ್ತಿಯಾಗುತ್ತಾನೆ. ಶರೀರ, ಮನಸ್ಸು ಒಂದಾಗಿ ಆತ್ಮನಲ್ಲಿ ಲೀನವಾದಾಗ ಉತ್ತಮ ಆರೋಗ್ಯ ಲಭಿಸುತ್ತದೆ. ಶರೀರ, ಮನಸ್ಸು, ಆತ್ಮದ ತೃಪ್ತಿಗೆ ಯೋಗದ ಅಗತ್ಯವಿದೆ. ಯೋಗದಿಂದ ಜ್ಞಾಪಕ ಶಕ್ತಿ ವೃದ್ಧಿಯಾಗಿ ರೋಗಗಳು ದೂರವಾಗುತ್ತವೆ ಎಂದರು.
ಸ್ಥಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ರವೀಂದ್ರ ವಿಜಾಪುರ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಕುಮಾರ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಮಾಲತಿ ಅಕ್ಕ, ಬಿಇಒ ಶ್ಯಾಮಸುಂದರ ಅಡಿಗ, ಕೆಎಲ್ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಆರ್.ಬಿ. ಪಾಟೀಲ, ಕೆ.ಸಿ. ಕೋಮಲಾಚಾರಿ, ರಾಮಸಿಂಗ್ ರಾಠೋಡ, ಗಿರಿಜಾ ಸಾಳೇರ, ಸರೋಜಾ ಸುಣಗಾರ, ಪಾರ್ವತಿ ಹುಲಿಹಳ್ಳಿ, ಶಶಿಕಲಾ ಬಡೆಂಕಲ್, ಡಾ. ಲಕ್ಷಣ ಪೂಜಾರ, ಎಚ್.ಎಸ್. ಮುದಿಗೌಡ್ರ, ವಜ್ರೇಶ್ವರಿ ಲದ್ವಾ, ಷಣ್ಮುಖಪ್ಪ ಕೋಟೂರ, ಕೆ.ಜಿ. ದಿವಾಕರಮೂತಿರ್ ಮತ್ತಿತರರಿದ್ದರು.