

ಯೋಗಿಗಳಿಗೆ ಪ್ರತ್ಯಾಹಾರವು ಸರ್ವ ವಿಧದ ವಿಷಯಗಳಲ್ಲಿಯೂ ಇಂದ್ರಿಯಗಳ ಅಪ್ರವೃತ್ತಿ ಎಂಬುದು ಸತ್ಯ. ಅವರು ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಈ ಐದು ಇಂದ್ರಿಯಗಳ ವಿಷಯಗಳಾದ ರೂಪ, ಶಬ್ದ, ಗಂಧ, ರಸ, ಮತ್ತು ಸ್ಪರ್ಶ ಇವುಗಳಲ್ಲಿ ಅನಾಸಕ್ತರಾಗಿ ಕೇವಲ ಪರಮಾತ್ಮನ ಚಿಂತನದಲ್ಲಿ ಮನಸ್ಸನ್ನು ಕೇಂದ್ರಿಕರಿಸುತ್ತಾರೆ. ಅವರು ಪೂರ್ಣತಃ ಜಿತೇಂದ್ರಿಯರಾಗಿತ್ತಾರೆ. ಇವರ ಸ್ಥಿತಿ ಹೇಗಿರುತ್ತದೆ? ಎಂದರೆ-
‘ಕಂಡ ಕಂಡಲ್ಲಿ ವಿಶ್ವರೂಪ ಕಾಂಬರೋ |
ಉಂಡು ಉಣಿಸಿದೆಲ್ಲ ನಿನ್ನ ಯಜ್ಞವೆಂಬರೋ |
ಬಂಡುಣಿಯಂದದಿ ನಾಮಾಮೃತವನುಂಬರೋ |
ಹೆಂಡತಿ ಮಕ್ಕಳು ನಿನ್ನ ತೊಂಡರೆಂಬರೋ |’
ಎಂದು ಜಗನ್ನಾಥದಾಸರು ತಿಳಿಸಿದ್ದಾರೆ. ಇಂಥವರ ಇಂದ್ರಿಯ ಗಳು ಸಹಜವಾಗಿಯೇ ವಿಷಯಗಳ ಕಡೆಗೆ ಹೋಗುವುದಿಲ್ಲ. ಇಂತಹ ಅಧಿಕಾರಿ ಜೀವಿಗಳಿಗೆ ಕ್ರಮೇಣ ಪರಮಾತ್ಮನು ಮನ-ಇಂದ್ರಿಯಗಳಿಗೆ ಪ್ರಸನ್ನತೆಯನ್ನು ಎಂದರೆ ತನ್ನ ದರ್ಶನಾದಿ ಗಳನ್ನಿತ್ತು ಅನುಗ್ರಹಿಸುತ್ತಾನೆ. ‘ಯಾವನು ಏನನ್ನಾದರೂ ಕೇಳಿ, ಮುಟ್ಟಿ, ನೋಡಿ, ತಿಂದು, ಮೂಸಿ ಹರ್ಷಿತನೂ, ದುಃಖಿತನೂ ಆಗುವುದಿಲ್ಲವೋ ಅವನೇ ಪೂರ್ಣ ಜಿತೇಂದ್ರಿಯನು’ ಎಂದು ಸ್ಮೃತಿಯು ತಿಳಿಸುತ್ತದೆ. ನ್ಯಾಯದರ್ಶನಕಾರರಾದ ಮಹರ್ಷಿ ಗೌತಮರು, ಸ್ವರೂಪ ಜ್ಞಾನದ ಬಗ್ಗೆ ಪ್ರಮಾಣಗಳನ್ನು ಕೊಡುತ್ತಾ ‘ಇಂದ್ರಿಯಾಂತರವಿಕಾರಾತ್’ ಎಂದರೆ ಒಂದು ಇಂದ್ರಿಯದ ಸಂಬಂಧ ಅದರ ವಿಷಯದೊಂದಿಗೆ ಆದಾಗ, ಬೇರೊಂದು ಇಂದ್ರಿಯದಲ್ಲಿ ವಿಕಾರ ಹುಟ್ಟುವುದರಿಂದ, ಶರೀರದಲ್ಲಿ ಆತ್ಮನಿದ್ದಾನೆ ಎಂಬುದಾಗಿ ಹೇಳಿದ್ದಾನೆ. ಒಂದು ಇಂದ್ರಿಯ ಇನ್ನೊಂದು ಇಂದ್ರಿಯ ದೊಂದಿಗೆ ಬಿಡಿಸಲಾಗದಂತೆ ಹೆಣೆದು ಕೊಂಡಿದೆ. ಅದಕ್ಕೆ ಮನು ಹೇಳೀದ್ದಾನೆ: ‘ಇಂದ್ರಿಯಗಳಲ್ಲಿ ಯಾವ ಒಂದು ಇಂದ್ರಿಯವು ವಿಷಯಾಸಕ್ತವಾದರೂ ಮಾನವನ ಬುದ್ಧಿಯು ಒಡಕು ಪಾತ್ರೆಯಿಂದ ನೀರು ಸೋರುವಂತೆ ಸೋರಲಾರಂಭಿಸುತ್ತದೆ’. ಮನುವಿನ ಭಾವನೆ ಸ್ಪಷ್ಟವಾಗಿದೆ. ಒಂದು ಇಂದ್ರಿಯವನ್ನು ಸಡಿಲ ಬಿಟ್ಟು, ಇನ್ನೊಂದನ್ನು ಬಿಗಿಹಿಡಿಯಲು ಸಾಧ್ಯವಿಲ್ಲ. ಆದುದರಿಂದ, ಇಂದ್ರಿಯ ನಿಗ್ರಹ ಎಂದೊಡನೆ ಪಂಚೇಂದ್ರಿಯ ನಿಗ್ರಹ ಎಂದೇ ಅರ್ಥಮಾಡಿಕೊಳ್ಳಬೇಕು. ಗೀತೆಯಲ್ಲಿ ಗೀತಾಚಾರ್ಯನು ಯೋಗಿಗೆ ಆಮೆಯ ದೃಷ್ಟಾಂತದಿಂದ ಹೇಳಿದ್ದು ಗೀತೆಯ ವೈಶಿಷ್ಟ್ಯ. ‘ಆಮೆಯು ಎಲ್ಲೆಡೆಯಿಂದಲೂ ತನ್ನ ಇಂದ್ರಿಯಗಳನ್ನು ಒಳಕ್ಕೆ ಸೆಳೆದುಕೊಳ್ಳುವಂತೆ, ಯಾರ ಇಂದ್ರಿಯಗಳು ವಿಷಯಗಳಿಂದ ಹಿಂತೆಗೆಯಲ್ಪಟ್ಟಿವೆಯೋ ಅವನೇ ಸ್ಥಿತಪ್ರಜ್ಞನು’. ನಾವು ಇಂದೂ ಕೂಡಾ ದೇವಾಲಯದ ಮಹಾದ್ವಾರದಲ್ಲಿ, ದೀಪದ ಕಂಬದ ಕೆಳಗೆ, ಯೋಗಿಗಳು ಕುಳಿತುಕೊಳ್ಳುವ ಆಸನದ ಕೆಳಗೆ, ಆಮೆಯ ಚಿತ್ರವನ್ನು ನೋಡಬಹುದು. ಆಮೆಯು ಬೇಕಾದಾಗ ತನ್ನ ಇಂದ್ರಿಯಗಳನ್ನು ಹೊರಕ್ಕೆ ಚಾಚಿ ಅಪಾಯ ಕಂಡಾಕ್ಷಣ ಒಳಕ್ಕೆ ಸೆಳೆದುಕೊಳ್ಳಬಲ್ಲದು. ಇಂದ್ರಿಯವಶ-ಜತೇಂದ್ರಿಯಕ್ಕೆ ಕೊಟ್ಟ ಉದಾಹರಣೆಯೇ ಆಮೆಯ ಉದಾಹರಣೆಯಾಗಿದೆ. ಯೋಗಿ ಎಲ್ಲಿ ಕುಳಿತರೂ, ನಿಂತರೂ ನಡೆದರೂ ವಿಷಯಗಳ ಸ್ಪರ್ಶ ಅವನಿಗಾಗದು. ಅವನ ಇಂದ್ರಿಯಗಳು ವಿಷಯಗಳಿಂದ ಹಿಂತೆಗೆದುಕೊಳ್ಳದೇ ಇರುವುದಿಲ್ಲ. ಬ್ರಹ್ಮನಿಷ್ಠನಾದವನು ಎಲ್ಲಿದ್ದರೂ ಭಯವಿಲ್ಲ ಎನ್ನುತ್ತಾರೆ ವಿಜಯದಾಸರು. ಪ್ರತ್ಯಾಹಾರ ಎಂಬ ಮಾತಿನರ್ಥ ‘ಹಿಂದಿರುಗುವುದು’ ಎಂದು. ಇಂದ್ರಿಯಗಳು ಮನಸ್ಸಿಗೆ ಹಿಂದಿರುಗುವುದು ಪ್ರತ್ಯಾಹಾರ. ಆತ್ಮನಿಗೆ ಹಾನಿಕರವಾದ ವಿಷಯಗಳಿವೆ. ಇಂದ್ರಿಯಗಳನ್ನು ಎಳೆದುಕೊಳ್ಳುವುದು- ಇದು ಪ್ರತ್ಯಾಹಾರದ ಪ್ರಥಮ ಸೋಪಾನ. ಸ್ವರೂಪ ಜ್ಞಾನಿಗೆ ಲಾಭಕರವಾದ ವಿಷಯಗಳಲ್ಲಿ ಅವನ್ನು ತೊಡಗಿಸುವುದು ಪ್ರತ್ಯಾಹಾರದ ದ್ವಿತೀಯ ಸೋಪಾನ. ಇವೆರಡನ್ನೂ ಹತ್ತಿದಾಗಲೇ ಆತ್ಮಶಕ್ತಿ ವರ್ಧಿಸಿ, ಕೇವಲ ಪಾಶಮಾರ್ಥಿಕ ದೃಷ್ಟಿಯಿಂದಲೇ ಅಲ್ಲ, ಸಾಂಸಾರಿಕ ದೃಷ್ಟಿಯಿಂದಲೂ ಜೀವನ ಸಾಫಲ್ಯವು ಸಿದ್ಧಿಸುವುದು.
(ಪ್ರತಿಕ್ರಿಯಿಸಿ: vvsudina@gmail.com)