ಯೋಗಕ್ಷೇಮ; ಕಾಲಿನ ನರಗಳು ಬಲಯುತವಾಗಲು ಯೋಗ

AROGYA
Published on
  • ಶವಾಸನ ವಿಶ್ರಾಂತಿಯ ನಂತರ ಮೇಲೆ ಏಳುವಾಗ ಯಾವ ಮಗ್ಗುಲಿನಿಂದ (ಬಲ ಕಡೆಯಿಂದ ಅಥವಾ ಎಡ ಕಡೆಯಿಂದ) ಏಳಬೇಕು ಎಂಬುದನ್ನು ತಿಳಿಸಿ. ನೌಕಾಸನ (ನಾವಾಸನ ) ತಲೆ ಮತ್ತು ಕಾಲನ್ನು ಎತ್ತುವಾಗ ಯಾವ ಸ್ಥಿತಿಯಲ್ಲಿ (ಪೂರಕ ಅಥವಾ ರೇಚಕ) ಇರಬೇಕೆಂದು ತಿಳಿಸಿ.

| ರಾಜೇಶ್ ಶೆಟ್ಟಿ, ಉಡುಪಿ

ಶವಾಸನದಲ್ಲಿ ಶವದ ಹಾಗೆ ಸ್ವಲ್ಪವೂ ಅಲ್ಲಾಡದೆ ಮಲಗುವುದರಿಂದ ಈ ಆಸನಕ್ಕೆ ಶವಾಸನ ಎಂದು ಹೆಸರು. ಯೋಗಾಭ್ಯಾಸದ ಕೊನೆಯಲ್ಲಿ ಕಡ್ಡಾಯವಾಗಿ ಶವಾಸನ ಮಾಡಬೇಕು. ದಣಿದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಬೇಕು. ಶವಾಸನದಿಂದ ಏಳುವಾಗ ಎಡಗಾಲನ್ನು ಮಡಚಿಕೊಂಡು ಬಲಬದಿಗೆ ತಿರುಗಿ ಏಳಬೇಕು. ಆಗ ಹೃದಯವು ನಿಮ್ಮ ಅಂಗಗಳಿಂತ ಮೇಲಿರುತ್ತದೆ.

ನೌಕಾಸನದ ಅಭ್ಯಾಸದಲ್ಲಿ ಉಸಿರನ್ನು ತೆಗೆದುಕೊಳ್ಳುತ್ತ ಎದೆ ಮತ್ತು ಪಾದಗಳನ್ನು ನೆಲದಿಂದ ಮೇಲಕ್ಕೆತ್ತಿ, ನಿಮ್ಮ ತೋಳುಗಳನ್ನು ನಿಮ್ಮ ಕಾಲುಗಳ ಕಡೆಗೆ ವಿಸ್ತರಿಸಿ, ಕಿಬ್ಬೊಟ್ಟೆಯ ಸ್ನಾಯುಗಳು ಸಂಕುಚಿತಗೊಂಡಂತೆ ನಿಮ್ಮ ಹೊಟ್ಟೆಯ ಪ್ರದೇಶದಲ್ಲಿನ ಒತ್ತಡವನ್ನು ಅನುಭವಿಸಿ. ದೇಹದ ತೂಕವು ಸಂಪೂರ್ಣವಾಗಿ ಪೃಷ್ಠದ ಮೇಲೆ ಇರಲಿ.

ನಿಮ್ಮ ಕಣ್ಣುಗಳು, ಕೈ ಬೆರಳುಗಳು ಒಂದೇ ಸಾಲಿನಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಉಸಿರನ್ನು ಹಿಡಿದುಕೊಳ್ಳಿ. ಆನಂತರ ವಿಶ್ರಮಿಸಿ. ಇದನ್ನು ಎರಡು ಅಥವಾ ಮೂರು ಬಾರಿ ಅಭ್ಯಾಸ ಮಾಡಿದರೆ ಸಾಕು. ಅತಿಯಾದ ಅಭ್ಯಾಸ ಸಲ್ಲದು.

  • ಹಲವು ತಿಂಗಳಿನಿಂದ ಕಾಲಿನ ಪಾದದ ಅಡಿಯಲ್ಲಿ ಉರಿಯುಂಟಾಗುತ್ತಿದೆ. ಯೋಗದ ಪರಿಹಾರ ತಿಳಿಸಿ.

| ಸಂಗಣ್ಣ ಜಮಖಂಡಿ (67 ವರ್ಷ)

ನಿಮ್ಮ ಪಾದಗಳಲ್ಲಿ ಸುಡುವ ಸಂವೇದನೆಯಿಂದ ಕಾಲುಗಳಲ್ಲಿನ ನರ ಹಾನಿಯಿಂದ ಉಂಟಾಗಬಹುದು. ಅನೇಕ ಕಾರಣಗಳಿವೆ. ಮಧುಮೇಹವು ಸಾಮಾನ್ಯವಾಗಿದೆ. ವೈದ್ಯರೊಂದಿಗೆ ಸಮಾಲೋಚಿಸಿ ಕಾರಣಗಳನ್ನು ಪತ್ತೆಹಚ್ಚಿ. ಒತ್ತಡದ ಮಟ್ಟ, ರಕ್ತದೊತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಯೋಗ ಪ್ರಯೋಜನಕಾರಿ.

ಅನೇಕ ಯೋಗಭಂಗಿಗಳು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಕಾಲಿಗೆ ಸಂಬಂಧಪಟ್ಟ ಯೋಗಗಳನ್ನು ಅಭ್ಯಾಸ ಮಾಡಿದಾಗ ಕಾಲಿನಲ್ಲಿ ರಕ್ತಚಲನೆ ಚೆನ್ನಾಗಿ ಜರುಗುತ್ತದೆ. ಕಾಲಿನ ನರಗಳು ಬಲಯುತವಾಗುತ್ತದೆ. ನೀವು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಆರಂಭದಲ್ಲಿ ಸರಳಯೋಗವನ್ನು ಪ್ರಾರಂಭಿಸಿ. ಮಲಗಿಕೊಂಡು ಗೋಡೆಗೆ ಎರಡೂ ಕಾಲುಗಳನ್ನು ಒರಗಿಸಿಟ್ಟು ಸ್ವಲ್ಪ ಹೊತ್ತು ಅಭ್ಯಾಸ ನಡೆಸಿ.

ನಿಮ್ಮ ಪಾದಗಳ ಆರೋಗ್ಯಕ್ಕಾಗಿ ತ್ರಿಕೋಣಾಸನ, ಅರ್ಧಚಂದ್ರಾಸನ, ಬದ್ಧಕೋಣಾಸನ, ವಜ್ರಾಸನ, ಉಷ್ಟ್ರಾಸನ, ಉತ್ಥಿತ ಏಕಪಾದಾಸನ, ಪವನಮುಕ್ತಾಸನ, ಮಾರ್ಜಾಲಾಸನ, ವಿಪರೀತಕರಣಿ, ಅಧೋಮುಖ ಶ್ವಾನಾಸನ, ಏಕಪಾದ ಶಲಭಾಸನ, ಶವಾಸನ, ನಾಡೀಶುದ್ಧಿ ಪ್ರಾಣಾಯಾಮ ಅಭ್ಯಾಸ ಮಾಡಿ.

ಯೋಗದ ಆರಂಭದಲ್ಲಿ ಪಾದಗಳಿಗೆ ವ್ಯಾಯಾಮವನ್ನು (ಯೋಗಶಿಕ್ಷಕರ ಸಮ್ಮುಖ) ಅಭ್ಯಾಸ ಮಾಡಿ. ಮುದ್ರೆಗಳಲ್ಲಿ ಪ್ರಾಣಮುದ್ರೆ, ವಾಯುಶೂನ್ಯ ಮುದ್ರೆಗಳನ್ನು ತಲಾ ಇಪ್ಪತ್ತು ನಿಮಿಷ ಅಭ್ಯಾಸ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net